’ಗದ್ದೆಯಂಚಿನ ದಾರಿ ’ ಯಲ್ಲಿ ಕವಿ ಎಲ್ ಸಿ ಸುಮಿತ್ರಾ ಕಂಡ ’ ತುಂಬೆ ಹೂ ’

*ಸುನಂದಾ ಕಡಮೆ

26239253_10208812176176250_8220081461148451596_n

’ಬರಹಗಾರರು ತಮ್ಮ ಅಂತರಂಗದ ಯಾವ ದಾರಿಯಲ್ಲಿ ಏನನ್ನು ಕಾಣುತ್ತಾ ಸಾಗುತ್ತಾರೆ ಎಂಬುದೇ ಅವರ ವ್ಯಕ್ತಿಗತ ಚೆಲುವನ್ನು ಪ್ರತಿನಿಧಿಸುತ್ತದೆ’ ಎಂದು ಎಮಿಲಿ ಥಾಮಸ್ ಅನ್ನೋ ಆಂಗ್ಲ ಲೇಖಕಿಯೊಬ್ಬರು ಹೇಳಿದ ಮಾತನ್ನು ಇಲ್ಲಿ ನೆನಪಿಸಿಕೊಳ್ಳುವುದಾದರೆ, ವಿನಯಶೀಲ ಕವಿ, ಸೂಕ್ಷ್ಮ ಕಥೆಗಾರ್ತಿ, ಅಧ್ಯಯನಶೀಲ ವಿಮರ್ಶಕಿ, ಯಶಸ್ವೀ ಅನುವಾದಕಿ, ಸಸ್ಯ ಪಾಲಕಿ, ಎಲ್ಲಕ್ಕಿಂತ ಹೆಚ್ಚಾಗಿ ಓರ್ವ ಪ್ರಧ್ಯಾಪಕಿಯೂ ಆಗಿರುವ ಡಾ. ಎಲ್ ಸಿ ಸುಮಿತ್ರಾ ಅವರು ಕನ್ನಡ ಸಾಹಿತ್ಯ ಕಂಡಂತೆ ತಮ್ಮ ಆಂತರ್ಯದ ಗದ್ದೆಯಂಚಿನ ಹಾದಿಯಲ್ಲಿ ಅವರಿದ್ದ ಮಲೆನಾಡಿನ ಪರಿಸರದ ಭಾಗವಾಗಿಯೇ ಬರುವ ತುಂಬೆ ಹೂಗಳಂತಹ ಮೃದು ಮನಸ್ಸಿನ ಪಾತ್ರಗಳನ್ನು ಸೃಷ್ಟಿಸುತ್ತಾ ಸಾಗುವವರು ಮತ್ತು ಅಂಥದ್ದೊಂದು ಅಭಿವ್ಯಕ್ತಿಯೇ ಅವರ ವ್ಯಕ್ತಿತ್ವದ ಒಟ್ಟಾರೆ ಸೊಗಸನ್ನು ಪ್ರತಿನಿಧಿಸಬಲ್ಲದು ಅಂದುಕೊಂಡಿದ್ದೇನೆ. ಇಲ್ಲಿ ಹಲವು ರೀತಿಯ ಪರಿಸರದ ಪಾಠಗಳಿವೆ, ಆಧುನಿಕ ಜೀವನ ಶೈಲಿಯು ನಮ್ಮೊಳಗೇ ಇರಬೇಕಾದ ಗ್ರಾಮೀಣ ಬದುಕನ್ನು ವಿನಾಕಾರಣ ಹೇಗೆ ಬದಿಗೆ ಸರಿಸುತ್ತಿವೆ ಎಂಬುದನ್ನು ತೀರಾ ನಾಜೂಕಾಗಿ ಸುಮಿತ್ರಾ ಕಟ್ಟಿಕೊಡುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಸುಮಿತ್ರಾ ಓರ್ವ ಪ್ರಾಧ್ಯಾಪಕಿ ಅಂತ ನಾನಿಲ್ಲಿ ಒತ್ತಿ ಹೇಳಲು ಕಾರಣವೇನೆಂದರೆ, ಅವರೇ ತಮ್ಮ ನಿವೃತ್ತಿಯ ನಂತರ ಒಂದು ಕಡೆ ಹೇಳಿದಂತೆ ’ನನಗೆ ಇನ್ನೊಮ್ಮೆ ಹೊಸದಾಗಿ ಜೀವನ ಆರಂಭಿಸುವ ಅವಕಾಶ ಸಿಕ್ಕರೆ ನಾನು ಮತ್ತೆ ಅಧ್ಯಾಪಕ ವೃತ್ತಿಯನ್ನೇ ಆಯ್ದುಕೊಳ್ಳುವೆ ’ ಎಂಬ ಮಾತು ಅವರ ಇಡೀ ವೃತ್ತಿ ಬದುಕಿನ ಸಾರ್ಥಕತೆಯನ್ನು ಹೇಳುವಂತಿದೆ. ಅವರೇ ಈ ಅಧ್ಯಾಪಕ ವೃತ್ತಿಯ ಬಗ್ಗೆ ಹೇಳುತ್ತಾ, ರಿಹರ್ಸಲ್, ರೀಟೇಕ್ , ರಿಪೀಟ್ ಇಲ್ಲದ ಲೈವ್ ಪರ್ಫಾರ್ಮನ್ಸ್ ನೀಡುವುದು ಎಂಬಲ್ಲಿ ಅವರ ವೃತ್ತಿಯ ಸಂಪ್ರೀತಿಯನ್ನು ನಾವು ಕಾಣಬಹುದು. ಹಾಗೆ ಅವರ ಪ್ರಬಂಧಗಳಲ್ಲಿ ಜೀವಸ್ವರದಂತೆ ನುಸುಳುವ ನೆನಪುಗಳ ಭಿತ್ತಿಗೂ, ತುಂಬೆ ಹೂ ಕವಿತೆಗಳಲ್ಲಿ ಎರಕ ಹೊಯ್ದು ನಿಂತ ಸ್ಮೃತಿಗಳ ತಾಜಾತನಕ್ಕೂ ಜಾಸ್ತಿ ವ್ಯತ್ಯಾಸವೇನೂ ನನಗೆ ಕಾಣಲಿಲ್ಲ. ಅವರ ಒಂದು ಪ್ರಬಂಧದಲ್ಲಿ ಬರುವ ’ಮೇಷ್ಟ್ರು ಹುಡುಗಿಯರಿಗೆ ಹೊಡೆಯುತ್ತಿರಲಿಲ್ಲ’ ಎಂಬ ಮಾತು ಅನೇಕಾರ್ಥಗಳ ಸೃವಿಸುವ ಧ್ವನಿಪೂರ್ಣ ಸಾಲುಗಳಂತೆ ಯಾಕೋ ಮನ ಕಲಕಿತು. ಹೀಗೆ ಪ್ರಬಂಧವನ್ನು ಕೂಡ ಸುಮಿತ್ರಾ ಕಾವ್ಯದ ಸಾಲುಗಳಂತೆ ಪೋಣಿಸುತ್ತಾರೆ, ಅವರ ಬರವಣಿಗೆಯಲ್ಲಿ ಮತ್ತು ನಡೆನುಡಿಯಲ್ಲಿ ಕೂಡ ಕಾವ್ಯವೇ ಮೇಳೈಸಿರುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರ ಅರಿವಿಗೂ ಬರುವಂಥದು.

ಇಲ್ಲಿಯ ಕವಿತೆಗಳಲ್ಲಿ ಉದ್ದರಿಸಲೇಬೇಕಾದ ಹಲವು ಸಾಲುಗಳಿದ್ದು, ಕಡೆಗಣಿಸಲಾಗದ ಭಾವಭಿತ್ತಿಯನ್ನು ಹೊಡಮರಳಿ ಚಿಂತಿಸುವಂತೆ ಪ್ರೇರೇಪಿಸುತ್ತವೆ, ಅಂಥವುಗಳಲ್ಲಿ ಕೆಲವನ್ನು ಇಲ್ಲಿ ಹೇಳಲು ಪ್ರಯತ್ನಿಸಿದ್ದೇನೆ..

21231291_10208053780176824_2048876506904820663_n

ಇಲ್ಲಿ ಗೋ ಪ್ರಕರಣಗಳ ದಾಂಧಲೆಯ ಸಮೀಕರಣವನ್ನು ಸುಮಿತ್ರಾ ಹೀಗೆ ಬಿಡಿಸಿಡುತ್ತಾರೆ..
ಭಾರತ ಮಾತೆಯ ಪೋಸ್ಟರ್/
ಕಾಗದವನ್ನು ಎರಡು ಗೋವುಗಳು ಎರಡೂ ಬದಿಯಿಂದ /
ಕಿತ್ತು ತಿನ್ನುತ್ತವೆ/ (ಗೋಪೂಜೆ)
ಇದನ್ನು ಓದಿದಾಗಲೇ ಬಹುಶಃ ನಮಗೆಲ್ಲ ಅವರ ಬದುಕು ಬರಹದ ಅಂತರಂಗದ ದಾರಿ ಯಾವುದು ಎಂಬುದು ಸ್ಪಷ್ಟವಾಗುತ್ತದೆ.

ಎರಡೂ ಪುಸ್ತಕಗಳನ್ನು ಓದಿ ಮುಗಿಸಿದಾಗ ಇಡಿಯಾಗಿ ಹಚ್ಚಹಸಿರಿನ ಪರಿಸರದ ದಾರಿಯಲ್ಲೊಂದು ಸಂವೇದನಾಶೀಲವಾದ ಒಂಟಿ ಮನಸ್ಸೊಂದರ ಆದರೆ ಅದು ಕೂಡ ಒಂದು ಉಲ್ಲಾಸದ ಪಯಣದಂತೆ ಭಾಸವಾಗುತ್ತದೆ. ಈ ಭಾವಕ್ಕೆ ಅನನ್ಯವಾಗಿ ಅವರದೊಂದು ಕವಿತೆಯ ಸಾಲನ್ನು ಉದಾಹರಿಸುವದಾದರೆ,
/ಅಕ್ಷರಗಳ ಅನುವಾದಿಸಿದ ರಾಗಗಳು ನೀರವ ರಾತ್ರಿಗಳನ್ನು ಕಾಣಿಸಿತು/ (ರಾತ್ರಿ ರಾಗ)
ಮತ್ತು
ಜಾತ್ರೆಯಲಿ ಯಾರ ಮುಖದಲ್ಲೂ ದುಗುಡವಿಲ್ಲ/
ನಗೆಯೇ ಎಲ್ಲ/ (ಜಾತ್ರೆಯಲ್ಲಿ ಒಂಟಿ) ಎನ್ನುವಲ್ಲಿ ಜಾತ್ರೆ ಸಡಗರದ ಚಿತ್ರದಲ್ಲಿ ಒಂಟಿ ಜೀವದ ಆತಂಕವನ್ನು ಕಂಡೂ ಕಾಣದಂತೆ ಹಿಡಿದಿಟ್ಟಿದೆ.

ಕತ್ತಲೆಯ ವಿಚಾರಗಳು ಕತ್ತಲೆಯೊಂದಿಗೆ ಮಾಡಿಕೊಳ್ಳುವ ಸಂಧಾನವನ್ನು ಇಲ್ಲಿಯ ಕವಿತೆಯೊಂದು ಹೇಗೆ ನಿರೂಪಿಸುತ್ತದೆಂದರೆ..
ಕವಿಯ ಮುಖವೋ/
ಶೋತೃಗಳ ಮುಖವೋ/
ಕತ್ತಲೆಯಿಂದ ಕತ್ತಲೆಗೆ ಕಾವ್ಯ/ (ಕತ್ತಲೆ ಕವಿಗಳು)
ಎಂಬೆಲ್ಲ ವೈರುಧ್ಯಗಳನ್ನು ಹೇಳುವ ಕಾವ್ಯ ಶೈಲಿ ನಿರಂತರ ಬೆಳಕನ್ನು ಅರಸುವ ಕಾವ್ಯವಾಗಿ ಕಾಣಿಸುತ್ತದೆ.

ಬರೆಯುವ ಪ್ರಕ್ರಿಯೆ ಎಷ್ಟು ಚಡಪಡಿಸುವಂಥದ್ದು ಅಂದರೆ, ಕವಿ ಮನೆಯ ಪ್ರವೇಶದ ಟಿಕೆಟ್ ಕೂಡ ಬೆರಗಿನ ಮನಸ್ಸನ್ನು ತಟ್ಟಿ ನೋಯಿಸಬಲ್ಲದು(ಕನಸಿನ ಕಾನೂರು)
ಬಾಬಾ ಬುಡನ್ ಗಿರಿಯಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲ ಕುರಂಜಿ ಹೂಗಳು ಕಾವ್ಯದ ಒಳಹರಿವನ್ನು ಘನೀಕರಿಸದೇ ಇರಲಾರವು (ನಿರಪೇಕ್ಷ )
ತುಟಿ ಕಟಿ ನಿತಂಬವೇ ಹೆಣ್ಣೆಂದು ಕಟೆದಿರುವ ಕಲ್ಲು ಶಿಲಾಬಾಲಿಕೆಯೂ ಸುಮಿತ್ರಾ ಅವರ ಕಾವ್ಯದ ಒಡಲುರಿಯಂತೆ ಕೆತ್ತಲ್ಪಡುತ್ತವೆ (ಪ್ರಾಚೀ ನಿತಂಬಿನಿಯ ಜಡೆ)
ವಲಸೆಯ ಹಕ್ಕಿಗಳು ತಿನ್ನುವ ಕಾಳು ವಿಷವಾಗಿ ಅವುಗಳ ಕಣ್ಣೀರೇ ಕವಿತೆಯಾದ ಬಗೆಯಲ್ಲಿ ಅಂತಃಕರಣದ ಮಿಡಿತ ಕಾಣುತ್ತದೆ. (ಎಲ್ಲಿಗೆ ವಲಸೆ)
ಕೆಂಪು ದಾಸವಾಳಗಳು ರಕ್ತದ ಬಣ್ಣವನ್ನು ನೆನಪಿಸುವ ಭೀಕರ ಸ್ಥಿತಿಯಲ್ಲಿ ನಾವಿದ್ದೇವೆ ಎಂಬ ಸುಮಿತ್ರಾ ಕಳಕಳಿ ನಿಜಕ್ಕೂ ಆಪ್ಯಾಯಮಾನ.
ಎಂದೋ ನಂಜು ಮೇಷ್ಟ್ರು ಕೊಟ್ಟ ನಾಗರ ಬೆತ್ತದ ಏಟಿಗೆ ಈಗಲೂ ಕೈ ಉರಿ ಅನುಭವಿಸುವ ಸುಮಿತ್ರಾ ಹಳೆಯ ನೆನಪುಗಳನ್ನು ಜೀವ ಸಹಿತವಾಗಿ ಕಾಣುವರು.
/ಇಬ್ಬರು ಎಳೆಯ ಪ್ರೇಮಿಗಳನ್ನೊಳಗೊಂಡ/ ಮನುಷ್ಯ ವಾಸನೆ, ಸ್ಮಾರಕದ ನಡುವಿನಲ್ಲಿ ಹುಟ್ಟತೊಡಗುವುದು ಕವಿತೆಯ ಕಣ್ಣಿನಂತೆ ಭಾಸವಾಗುತ್ತದೆ
ಕತ್ತಲೆಯ ಕೊಲ್ಲುವ ಶಕ್ತಿಯನ್ನು ಹಳೆಯ ದೇಗುಲಗಳ ಒಡನಾಟದಲ್ಲಿ ಪಡಕೊಳ್ಳುವ ಅತೀತ ಮಾಯಾಜಾಲವೊಂದು ರಾತ್ರಿ ಮಳೆಯಲ್ಲಿ ಕಾಣಿಸುತ್ತದೆ.
ಪಟಿಕದ ಹೂವಿನ ನೀರ ರಂಗನ್ನು ಆವಾಹಿಸಿಕೊಂಡ ಹಳೇ ಪುಸ್ತಕದ ಪುಟಗಳಲ್ಲೆಲ್ಲ ಕನಸನ್ನು ಅರಸುವ ಕಾವ್ಯ ಇಲ್ಲಿಯ ಸಾರ್ಥಕತೆಯಾಗುತ್ತದೆ.
ಹೀಗೆ ಕಳೆದುಕೊಂಡ ಜೀವವೊಂದರ ಪರಿಭಾಷೆಯೆಂಬಂತೆ ಸುಮಿತ್ರಾ ಕವಿತೆ ಮತ್ತು ಬರಹಗಳು ಸ್ಮೃತಿಯ ಮೂಲಕವೇ ಉಸಿರನ್ನು ಅರಸುತ್ತ ಸಾಗುತ್ತದೆ.

ಚರಿತ್ರೆಗಳು ಕೂಡ ಹೆಣ್ಣಿಗೆ ಹೊರಿಸಿದ್ದ ಅನಿವಾರ್ಯದ ಕೌಟುಂಬಿಕ ಜವಾಬ್ದಾರಿಗಳನ್ನು ಹಾಗೂ ವ್ಯವಸ್ಥೆ ಮಹಿಳೆಯರಿಂದ ಬಯಸುವ ತ್ಯಾಗಗಳನ್ನು ಸುಮಿತ್ರಾ ಎಂಥ ಹರಿತ ಸಾಲುಗಳಲ್ಲಿ ಹಿಡಿಯುತ್ತಾರೆಂದರೆ,
ಎಂದೂ ಯಾವ ರಾಣಿಗೂ /
ವೈರಾಗ್ಯ ಬಂದು ಕಾಡಿಗೆ ಹೋಗಲಿಲ್ಲ/(ವಿರಾಗಿ)
ಎನ್ನುತ್ತಲೇ ಕವಿತೆ ತನ್ನೊಳಗಿನ ಅಂತರಂಗವನ್ನು ಮರೆಮಾಚಿ ಸ್ತ್ರೀ ಘನತೆಯನ್ನು ಸಾಧಿಸುತ್ತದೆ.

ಮೌನ ಎಷ್ಟು ಅರ್ಥಗರ್ಭಿತವಾಗಿ ನಮ್ಮ ನಮ್ಮ ಹಾದಿಗಳನ್ನು ಸಲಹುತ್ತ ಸಾಗುತ್ತದೆ ಎಂಬುದಕ್ಕೆ ಈ ಕೆಳಗಿನ ಸಾಲುಗಳನ್ನು ನಾವು ನೋಡಬಹುದು..
ವರ್ಷಗಳ ನಂತರದ ಸಹಪಯಣ/
ಮೌನದಲೇ ಕಳೆಯಿತು ಉದ್ದಾನುದ್ದ ದಾರಿ/(ದಾರಿ)
ಎಂದು ಇಡೀ ಬದುಕಿನ ಬಿಂಬಗಳ ಹೆಕ್ಕಿಕೊಂಡು ಸಂತೈಸುತ್ತದೆ.

13435493_10154256871799648_6205703291971564006_n

ರಾತ್ರಿಯೆಲ್ಲ ಸುರಿದ ಜಡಿಮಳೆಗೆ/
ಬೆಳಿಗ್ಗೆ ಅರಳಬೇಕಾದ ತಾವರೆ ಮುದುಡಿ ಮಲಗಿತ್ತು/ (ಮಳೆ ಮಳೆ)
ಹೂವಿನಲ್ಲಿ ಜೀವವನ್ನೇ ಎಳೆತರುವ ತಾಕತ್ತು ಸುಮಿತ್ರಾ ಅವರ ಕವಿತೆಗಳ ಕಣ್ಣಿಗಿದೆ.

ಕವಿಮನೆಯಲ್ಲಿ ನಿಂತಿರುವ ಗಡಿಯಾರ/
ನಿರಂತರ ಗಂಟೆ ಒಂದು/
(ಕಾಲವಿಲ್ಲಿ ನಿಂತಿದೆ) ಕಾಲ ತಟಸ್ತವಾದ ಬಗೆಯನ್ನು, ಕವಿ ಮನೆಯ ಗಡಿಯಾರದ ರೂಪಕದಲ್ಲಿ ಹೇಳುತ್ತಾ, ಸೂಕ್ಷ್ಮ ಅವಲೋಕನವನ್ನು ತೋರಿಸುತ್ತದೆ.

ಕ್ರಿಸ್ ಮಸ್ ಟ್ರೀ ನೆರಳಲ್ಲಿ /
ಸಂತನಂತೆ ಕೂತ ಕಾಗೆ ಮೌನವಾಗಿದೆ/ (ಪರೀಕ್ಷೆ ಹಾಲ್ ನಿಂದ )ಎಂಬಂತಹ ಸಾಲುಗಳು ಆರ್ದ್ರ ಮನಸ್ಸಿನಿಂದ ಮಾತ್ರ ಹುಟ್ಟುವಂಥವು ಅನ್ನಿಸುವಂತಿವೆ.

ಮೋಡ ಹನಿದರೆ/
ಸಮುದ್ರ ಅಳುತಿದೆ ಅನ್ನುವರು/
ಚಿಪ್ಪೊಡೆದ / ಮೌನದಲ್ಲಿ ಗುಲಾಬಿ ಸೌಗಂಧಿ ಎಲ್ಲ ಮಾತಾಡುವುದು/
ತೆಳ್ಳನೆಯ ಶರೀರ ಹೊತ್ತ / ವೈದೇಹಿ ಮಜ್ಜಿಗೆ ತರಲು/
ತೇಲಿದಂತೆ ಅಡುಗೆ ಮನೆಗೆ ಹೋದರು/ (ಇರುವಂತಿಗೆಯಲ್ಲಿ) ಎಂಬಲ್ಲಿ ಇನ್ನೊಬ್ಬ ಸೃಜನಶೀಲ ಬರಹಗಾರ್ತಿಯ ವಾತ್ಸಲ್ಯದ ರೂಪ ಕಣ್ಣಿಗೆ ಕಟ್ಟುತ್ತದೆ.

ಸವಾರರಿಲ್ಲ/
ಪೂರ್ವದಲ್ಲಿ ದ್ವಾರಪಾಲಕ/
ಕೈಯಲ್ಲಿ ಭರ್ಚಿ ಜೀವವಿಲ್ಲ/
(ಪ್ರತಿಮೆಗಳು ಕಾವಲು ಕಾಯುತ್ತಿವೆ)
ಎನ್ನುವುದು ಇತಿಹಾಸದ ಪ್ರತಿಮೆಗಳ ಜೀವವಿಲ್ಲದ ಭಾವಗಳಿಗೆ ಜೀವಕೊಡುವ ರಾಜಕೀಯ ಕುಯುಕ್ತಿಯ ಕುರಿತು ಸಹ ಕವಿಮನಸ್ಸು ಹೊರಳಿ ವೀಕ್ಷಿಸಿದಂತಿದೆ.

26167775_10208758783881476_4233242297746232741_n

ಮಳೆ ಬಂದ ಮರುದಿನ ಎಲ್ಲೆಲ್ಲೋ / ಅಲೆವ ಮನ/
ಎಲ್ಲೆಲ್ಲೂ ರೆಕ್ಕೆಯುದುರಿದ ಮಳೆಹುಳ/
(ಮಳೆ ಬಂದ ಮರುದಿನ)ಕೀಟಗಳ ಜೀವದ ತಲ್ಲಣಗಳನ್ನು ಕೂಡ ಕವಿತೆ ನಿರಂತರ ಹಿಡಿದು ನಡೆಸುವದು.

ಗದ್ದೆಯಂಚಿನ ಇಬ್ಬನಿ ಹನಿಗಳು/
ಉದ್ದಲಂಗದ ನಿರಿಗೆ ಒದ್ದೆ /(ತುಂಬೆ ಹೂ)
ಎನ್ನುತ್ತ ತುಂಬೆ ಹೂವ ನಾಜೂಕುತನ ಹಾಗೂ ಹಗುರನ್ನು ವರ್ಣಿಸುವ ಕಾವ್ಯಾರ್ಥಗಳು ಹೂವಿಗಿಂತ ಶ್ರೇಷ್ಠವಾದ ಹೂಮನಸ್ಸನ್ನು ಹೊಕ್ಕು ಹೊರಬರುತ್ತದೆ

ಎಂಥದೇ ಕಾರ್ಪಣ್ಯಗಳ ಮಧ್ಯೆಯೂ ಜೀವನ ಪ್ರೀತಿ ಕಳೆದುಕೊಳ್ಳದೇ ಪರಸ್ಪರ ಸೌಜನ್ಯ ಉಳಿಸಿಕೊಂಡು ಬದುಕು ನಡೆಸುತ್ತಿರುವ ತಳಮಟ್ಟದ ಸಹಜೀವಿಗಳನ್ನು ಕೂಡ ಸುಮಿತ್ರಾ ಕಕ್ಕುಲಾತಿಯಿಂದ ತಲೆ ನೇವರಿಸುವಂತೆ ಹೇಗೆ ಬರೆಯುತ್ತಾರೆ ನೋಡಿ..
ಬೀದಿ ಮಕ್ಕಳ ಮುಗ್ಧ ನಗುವಿನಂತೆ /
ಕಟ್ಟಿಗೆ ಹೊತ್ತು ಸಾಗುವ ಹುಡುಗಿಯಂತೆ /
ತಲೆಯಲ್ಲಿ ಭಾರ ಮೊಗದಲ್ಲಿ ಮಂದಹಾಸ/
ಗುಂಪಾಗಿ ಜಾತ್ರೆಯ ಜನರಂತೆ / (ಕಾಡು ಸೂರ್ಯ ಕಾಂತಿ ಹೂಗಳು)
ಇಲ್ಲಿ ತಮ್ಮಷ್ಟಕ್ಕೇ ಅರಳಿ ನಗುವ ಮುಗ್ಧ ಜೀವಗಳ ಕುರಿತಾದ ಒಂದು ಸಂಯಮದ ನೋಟವಿದೆ,

ಯಾಕೋ ಬೇಸರ ಖಾಲಿ ಮನದ /
ಕಂಕಾಣ ಕೋಣೆ/ (ಗಾಳಿಯ ಜೊತೆ)
ಹಗುರ ಹೊತ್ತಿಗಾಗಿ ಕಾಯುವ ಮನಸ್ಸು ಎಲ್ಲ ಜಡತ್ವಗಳನ್ನೂ ನಿರಾಕರಿಸುತ್ತದೆ.

ನಾಟಕದ ಪಾತ್ರದಾರಿ /
ಕಲ್ಲು ದೇವರುಗಳು ಮಾತ್ರ/
ಕಿರೀಟ ತೊಡಲು ಸಾಧ್ಯ/(ಸಧ್ಯ ನಮಗೆ ಕಿರೀಟವಿಲ್ಲ)
ಎಂಬ ಕಿರೀಟದ ಸಂಭ್ರಮವನ್ನು ಅಲ್ಲಗಳೆಯುತ್ತಲೇ ಕವಿತೆ ಅದನ್ನು ತಿರಸ್ಕರಿಸುವದು ಮತ್ತು ಕಿರೀಟದ ಮಹತ್ವವನ್ನು ಹೇಳುತ್ತಲೇ ಅದಕ್ಕಿರುವ ಮುಳ್ಳಿನ ಕುರಿತು ಎಚ್ಚರಿಸುವುದು ಇಲ್ಲಿ ಮುಖ್ಯವೆನಿಸುತ್ತದೆ.

ಕಲ್ಲು ಹೂ ಹೊಟ್ಟೆ ತುಂಬಿರುವಂತೆ /
ಹಸಿದವರು ತಂದ ಹಣ/
ಎಂಬಲ್ಲಿ ಕಾವ್ಯದ ಜೀವಾಳವೇ ಆದಂತಹ ಬಡವ ಬಲ್ಲಿದರ ಕುರಿತಾದ ಕಾಳಜಿ ಕಾಣುತ್ತದೆ.

ಬಂಧನ ಮತ್ತು ಬಿಡುಗಡೆಯ ಎರಡು ಮನಸ್ಥಿತಿಗಳು ಅದನ್ನೂ ಮೀರಿದ ಪ್ರತಿಮೆಗೆ ಬಂದೊದಗುವ ಆಪತ್ತನ್ನು ಸುಮಿತ್ರಾ ಮೂರೇ ಸಾಲಿನಲ್ಲಿ ಹೀಗೆ ಹೇಳಬಲ್ಲರು..
ಕೂಡಿ ಹಾಕಿದ್ದಾರೆ ನಿನ್ನ/
ಸರಳುಗಳ ಪಂಜರದಲ್ಲಿ/
ಪ್ರತಿಮೆಯನ್ನೂ ಜನ ಬಿಡುವುದಿಲ್ಲ/ (ಉಡುತಡಿಯ ದಾರಿಯಲ್ಲಿ) ಎಂಬಲ್ಲಿ ಸಕಾರಣ ತಾಪವಿದ್ದದ್ದು ಕಂಡು ಬರುತ್ತದೆ.
ಇಲ್ಲಿ
ನೀನಾ ನದಿಯ ದಡದಲ್ಲಿ /
ಶಾಂತಿಗೀತೆ ಹಾಡಿದ/
ಅನ್ನಾ ಅಹ್ಮತೋವಾ ಕೂಡ ಬಂದು ಹೋಗುತ್ತಾಳೆ.

23621393_10208469387566749_3387102182686144051_n

’ಮರಳಿ ಬಾರದ ಕಾಲ’ ದಲ್ಲಿ ಬಾಲ್ಯವನ್ನು ಮರಳಿ ಬಾರದ ಕಾಲವೆಂದೇ ಭಾವಿಸುವ ಲೇಖಕಿ ಎಲ್ಲವನ್ನೂ ಇಂದಿನ ಕಣ್ಣಿನಲ್ಲಿ ನಿಂತು ಆವಾಹಿಸಿಕೊಳ್ಳುತ್ತಾರೆ. ಅಪ್ಪ ಅಮ್ಮನ ಕುರಿತಾದ ನೆನಪುಗಳು ಒಳಮನಸ್ಸನ್ನು ಹಾಗೂ ಮಕ್ಕಳ ವ್ಯಕ್ತಿತ್ವವನ್ನು ಕಾಯುವ ಬಗೆಯನ್ನು ಹೇಳುತ್ತದೆ. ’ಅಮ್ಮನ ಮುಖ’ ಕವಿತೆಯಲ್ಲೂ ಸಹ ಅಮ್ಮನ ದಿನಚರಿಯ ಹಲವು ಮುಖಗಳು ಕಾಣಿಸುವದಲ್ಲದೇ, ಅವಳ ಚಹರೆಯ ಹಿಂದಿನ ಅವ್ಯಕ್ತ ನೋವನ್ನು ಮತ್ತು ನಲಿವಿನ ತೆಳು ಗೆರೆಗಳನ್ನು ಬಿಂಬಿಸುವ ತಾದಾತ್ಮ್ಯ ಸಾಧಿಸಿದ ಕ್ಷಣವೊಂದು ನಮ್ಮನ್ನು ಅಲುಗಾಡಿಸಿಬಿಡುವಂತಿದೆ.

’ಇಸ್ಕೂಲ್ ಗೆ ಹೋಗಿದ್ದು’ ಪ್ರಬಂಧದಲ್ಲಿ ’ಆಟವಿಲ್ಲ, ಪಾಠವೆಂಬ ಶಿಕ್ಷೆ ಮಾತ್ರ’ ಎಂಬಲ್ಲಿ ಮಕ್ಕಳ ಮಾನಸಿಕ ವಿಕಾಸದ ಕುರಿತು ಚಿಂತನೆಯಿದೆ. ಅವರ ಪ್ರಬಂಧ ಶೈಲಿ ಆಪ್ತವಾದುದು ಅಷ್ಟೇ ಸೂಕ್ಷ್ಮವಾದುದು,
ಇಂದಿನ ಶಾಲೆ ಮಕ್ಕಳ ದಿನಚರಿಯನ್ನು ಹೇಳುತ್ತಲೇ ಐವತ್ತು ವರ್ಷಗಳ ಹಿಂದಿನ ತಮ್ಮ ಇಸ್ಕೂಲು ಕಲಿತ ದಿನಗಳನ್ನು ಮೆಲುಕು ಹಾಕುವ ಸಂದರ್ಭದಲ್ಲೇ ಅಂದಿನ ಜೀವನ ಶೈಲಿಗಳು ಅನಾವರಣಗೊಳ್ಳುತ್ತವೆ.
ಹಾಗಾಗಿ ಈ ಪ್ರಬಂಧ ಸಂಕಲನ ಲೇಖಕಿಯ ಲೇಖಕಿಯ ಆತ್ಮಕಥಾನಕದ ತುಣುಕಿನಂತೆಯೂ ಭಾಸವಾದರೆ ಅಚ್ಚರಿಯೇನಿಲ್ಲ.

ಜೊತೆಗಾರ ಟೈಗರ್ ನನ್ನು ಕಳಕೊಂಡ ಮಿರ್ಜಾ ಮಂಕಾಗಿ ಬಚ್ಚಲೊಲೆಯ ಬಳಿ ಮೂರು ದಿನ ಮಲಗಿ ಪ್ರಾಣಬಿಟ್ಟ ಕುರಿತಾದ (ಮಿರ್ಜಾ) ಕವಿತೆ ತನ್ನೊಳಗೆ ಬಿಟ್ಟುಕೊಳ್ಳುವ ಪರಿಯಲ್ಲೇ ಮಾನವೀಯತೆಯ ದರ್ಶನ ಸಿಗುತ್ತದೆ. ಪುರಾತನ ವೃಕ್ಷ ಸಿಹಿ ಕಾಸರಕ ಪ್ರಕೃತಿ ವಿರುದ್ಧ ಮಾಡಿಕೊಂಡ ಬದಲಾವಣೆಗೆ, ಮನುಷ್ಯನೂ ಪಕ್ಕಾಗಬೇಕು ಎಂಬ ಆಶಯದ ಪುಟ್ಟ ಕವಿತೆ ಕೂಡ ಒಂದು ಮೌಲ್ಯವನ್ನು ಹೇಳುತ್ತಿದೆ.

ಬೆನ್ನುಡಿ ಬರೆದ ಎಚ್ಚೆಸ್ಸಾರ್ ಇಪ್ಪತ್ಮೂರು ಸಾಲುಗಳಲ್ಲೇ ಇಲ್ಲಿರುವ ಕಾವ್ಯದ ಸತ್ವವನ್ನು ಪರಂಪರೆಯಲ್ಲಿ ನಡೆವ ಭಿನ್ನ ದಾರಿಯನ್ನು ಪೋಷಿಸುವ ಆಶಯಗಳನ್ನು ಮತ್ತು ಕಾಣುವ ಸತ್ವಗಳನ್ನು ಹಾಗೂ ಕೇಳುವ ಒಂಟಿದನಿಯನ್ನು ಹೀಗೆ ಏನೆಲ್ಲವನ್ನೂ ಬಿಡಿಸಿಟ್ಟಿದ್ದಾರೆ.

ಸುಮಿತ್ರಾ ಅವರ ಕಾವ್ಯ ಚಿಂತನೆಗಳು ಒಂದು ತೂಕದ್ದಾದರೆ, ಅವರ ’ಅಡಿಕೆ ಚಪ್ಪರ’ ಪ್ರಬಂಧದ ವಿಸ್ತಾರಗಳು ಇನ್ನೊಂದೇ ತೂಕವುಳ್ಳದ್ದು, ಅಂದಿನ ಎಕಾನಮಿಯನ್ನು ಲೇಖಕಿ ಎಷ್ಟು ಅರ್ಥಪೂರ್ಣವಾದ ವಿವರಗಳಲ್ಲಿ ಹೇಳುತ್ತಾರೆ ನೋಡಿ, ಮನೆಯ ಆರ್ಥಿಕ ಸ್ಥಿತಿ ಅವರವರ ಮನೆಯ ಚಪ್ಪರದ ಕಂಬಗಳ ಸಂಖ್ಯೆಯ ಮೇಲೆ ನಿರ್ಧಾರವಾಗುತ್ತಿತ್ತು, ಕಂಬಗಳ ಸಂಖ್ಯೆ ಜಾಸ್ತಿ ಇದ್ದು, ಚಪ್ಪರ ದೊಡ್ಡದಿದ್ದರೆ ಅವರಿಗೆ ಆದಾಯ ಜಾಸ್ತಿ ಇದೆ ಎಂದು ಭಾಸವಾಗುತ್ತಿತ್ತು. ಅಡಿಕೆ ಚಪ್ಪರದ ಅವಿಸ್ಮರಣೀಯ ಸಾಲುಗಳಿವು.

14721678_10205871979793178_1236882496121947014_n

ರಾತ್ರಿ ಹೊರಗೆ ಹೋದರೆ ಟಾರ್ಚು ಹಿಡಿದು ಜತೆಗೆ , ಹಾವು ಇದ್ದರೆ ದೂರ ಹೋಗಲಿ ಅಂತ ಕಾಲನ್ನು ನೆಲಕ್ಕೆ ಬಡಿದು ಶಬ್ದ ಮಾಡುತ್ತಾ ಹೋಗುವುದು ’ಹಾವಿನ ಹೆಜ್ಜೆ’ ಯಲ್ಲಿ ನಮ್ಮೆಲ್ಲರ ಬಾಲ್ಯದ ಅನುಭವಾಗಿ ಮೂಡಿದೆ, ಇಲ್ಲಿ ಬರುವ ಪ್ರೈಮರಿ ಶಾಲೆಯಲ್ಲಿ ’ನಾಗರ ಹಾವೇ ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೆ?’ ಎಂದು ರಾಗವಾಗಿ ಹೇಳಿದ ಪದ್ಯದಲ್ಲಿ ಬರುವ ಹಾವೂ ನಿಜದ ಹಾವೂ ನಮಗೆ ಎಂದೂ ಒಂದೇ ಆಗಿರಲಿಲ್ಲ ಮತ್ತು ದೊಡ್ಡವರಾದ ನಂತರ ಹಾವನ್ನು ಕುರಿತ ಎಚ್ಚರಿಕೆ ಭಯಗಳು ಕಡಿಮೆಯಾಗಲಿಲ್ಲ ಎಂಬ ಅವರ ಮಾತು ಭಯದ ನೆಲೆಯಲ್ಲಿ ಮನಸ್ಸಿನ ಅಳುಕನ್ನು ನಮ್ಮ ಯಾವುದೇ ಚಿಂತನೆಗಳು ಆಳಲಾರವು ಎಂಬುದನ್ನು ಸಾಭೀತು ಪಡಿಸುತ್ತವೆ.

ನಾಲ್ಕನೇ ತರಗತಿಯಲ್ಲಿ ನಾಟಕವೊಂದರಲ್ಲಿ ರಾಮನ ಪಾತ್ರ ಮಾಡಿದ ಅಭಿನಯ ಕಲೆಯನ್ನೂ ಸ್ಪರ್ಶಿಸಿದ ಲೇಖಕಿ, ಮಳೆಗಾಲದ ಶಾಲೆಯ ದಾರಿಯಲ್ಲಿ ನಡೆವಾಗ, ದೊಡ್ಡ ಕ್ಲಾಸಿನ ಮಕ್ಕಳ ಮಾತುಗಳಲ್ಲಿ ಸಣ್ಣ ಕ್ಲಾಸಿನ ಮಕ್ಕಳು ತಿಳಿಯುವ ಹೊಸ ಹೊಸ ವಿಚಾರಗಳು ಹಾಗೂ ಮಲೆನಾಡಿನ ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಕಷ್ಟ, ಇವೆಲ್ಲ ಆಪ್ತ ಚಿತ್ರಗಳನ್ನು ಕಟ್ಟಿಕೊಡುತ್ತದೆ. ಮಳೆಗಾಲದಲ್ಲಿ ರೈತರು ಅನುಭವಿಸುವ ಸಂಕಷ್ಟಗಳು ಪ್ರಬಂಧದ ತೂಕವನ್ನು ಅಮೂಲ್ಯವಾಗಿಸಿದೆ, ’ಭೂಮಿತಾಯಿಯ ಚೊಚ್ಚಲ ಮಕ್ಕಳು’ ಎಂಬಲ್ಲಿ ಬಂಡವಾಳಶಾಹಿಗಳನ್ನು ತೋರುತ್ತ ರೈತರ ಜೀವವನ್ನು ಭೂಮಿತಾಯಿಯ ಮಲಮಕ್ಕಳ ಹಾಗೆ ಕಾಣುವ ಸಂದಿಗ್ಧದಲ್ಲೇ ಕವಿತೆ ರಾಜಕೀಯದ ವ್ಯಂಗ್ಯವನ್ನು ಬೆಳಕಿಗೆ ತರಬಲ್ಲದು.

ಕಾಂಬೋಡಿಯಾ ನೋಟಗಳು, ಅಂಕೋರ್ ವಾಲ್ ದೇವಾಲಯಗಳ ಕುರಿತಾದ ಪರಿವೀಕ್ಷಣೆಯ ಮಹತ್ವ, ಪರಿಸರ ಪ್ರೀತಿಯ ಭೂಮಿ ಹುಣ್ಣಿಮೆ, ಎಳ್ಳಮವಾಸ್ಯೆ ಜಾತ್ರೆ ಮತ್ತು ರಾಜಕುಮಾರ ಇಲ್ಲದ ಸಿನೆಮಾಗಳು ನೋಡಲು ಸಿಗುತ್ತಿದ್ದ ಎಳ್ಳಮವಾಸ್ಯೆ ಜಾತ್ರೆಯ ಕುರಿತಾಗಿಯೂ ಸುಮಿತ್ರಾ ಹೇಳಲು ಮರೆಯುವದಿಲ್ಲ.

ತೀರ್ಥಹಳ್ಳಿ ತಾಲೂಕಿನ ೫ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದಾಗ ಸುಮಿತ್ರಾ ಮಾಡಿದ ಭಾಷಣವೂ ಅಂತಹದ್ದೊಂದು ಅನುಭವಗಳ ಶುದ್ಧ ಒಳಹರಿವೇ ಆಗಿದೆ. ಎಲ್ಲ ಸಂಗತಿಗಳಲ್ಲೂ ಲೇಖಕಿ ನೆನಪಿನ ಸರೋವರವನ್ನು ಕೆದಕುತ್ತಾರೆ, ಮತ್ತು ಅಲ್ಲೇ ಅದಕ್ಕೆ ಉತ್ತರವನ್ನೂ ಕಂಡುಕೊಳ್ಳುತ್ತಾ ಹೋಗುತ್ತಾರೆ ಎಂಬುದು ಸ್ಪಷ್ಟ. ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ನೆನಪುಗಳು ಅತಿಶ್ರೇಷ್ಟವಾದದ್ದು, ಎಂಬುದು ಬಹುತೇಕ ಬರಹಗಾರರ ಅಭಿಪ್ರಾಯವೆಂಬುದನ್ನು ಒಪ್ಪಿಕೊಳ್ಳುತ್ತಲೇ ಸುಮಿತ್ರಾ ಬರಹವನ್ನು ನಾವು ಸವಿಯಬೇಕು, ಪದವಿ ಶಿಕ್ಷಣ ಸೊರಗತೊಡಗಿದ್ದು ಪಿಯೂ ಹಂತದಲ್ಲಿ, ಸಿಈಟಿ ಪರೀಕ್ಷೆಗಳು ಆರಂಭವಾದ ಮೇಲೆ ಎನ್ನುವ ಲೇಖಕಿಯ ಮಾತು ಇಂದಿನ ಶಿಕ್ಷಣ ಪದ್ದತಿಯ ದೋಷವನ್ನು ಎತ್ತಿಹೇಳುತ್ತದೆ, ಪದವಿಗಾಗಿ ಪದವಿ ಎಂದು ಬರುವ ಬಿಎ ಕಲಿಯುವ ವಿದ್ಯಾರ್ಥಿಗಳನ್ನು ಹತ್ತಿರದಿಂದ ಕಂಡ ಶಿಕ್ಷಕಿಯೂ ಆಗಿರುವ ಲೇಖಕಿ ಇಂಥವೆಲ್ಲ ಸೂಕ್ಷ್ಮವನ್ನು ಅನುಭವಿಸಿ ಬಲ್ಲವರು, ಹಾಗೆ ಇಲ್ಲಿಯ ಬರವಣಿಗೆ ಪ್ರಾಮಾಣಿಕವೆನಿಸುತ್ತದೆ. ಇಂದಿನ ಪಠ್ಯಕ್ರಮ ಇರಬೇಕಾದ ನೆಲೆಯನ್ನು ಹಾಗೂ ಶಿಕ್ಷಣ ಪದ್ದತಿಯ ಲೋಪದೋಷಗಳನ್ನು ಬಿಡಿಬಿಡಿಸಿ ಇಲ್ಲಿ ವಿಶ್ಲೇಷಿಸಿದ್ದಾರೆ.

’ಹೊತ್ತು ಮಾರುವವರು ’ ದಲ್ಲಿ ಪಿಕಳಾರಗಳ ಸ್ವರ ಇವರ ಅಕ್ಷರ ಲೋಕವನ್ನು ಹಸಿಯಾಗಿಟ್ಟಿದೆ, ಮಲೆಗಳಲ್ಲಿ ಮದುಮಗಳು ಹಾಗೂ ತೇಜಸ್ವಿಯವರ ಬರಹ ಲೋಕದಲ್ಲಿ ಬರುವ ಪರಿಸರ ಹಾಗೂ ಮಂಜ ಮತ್ತು ಸೇಸೆ ಎಂಬ ಮಹಿಳೆಯರ ಹೆಸರುಗಳು ಆಪ್ತವಾದ ಭಾವವನ್ನು ಎಳೆದು ತರಬಲ್ಲದು. ಇಲ್ಲಿ ಪ್ರವೇಶಿಸುವ ಪಾತ್ರಪ್ರಂಪಂಚವು ತಂತಮ್ಮ ಕತೆಗಳನ್ನು ತೆರೆದಿರಿಸುತ್ತ ಓದನ್ನು ಕುತೂಹಲದಿಂದ ಸಾಗಿಸುತ್ತವೆ. ಇಲ್ಲಿಯ ಜನಪದರ ಭಾಷೆ ಕೂಡ ಪ್ರಾದೇಶಿಕತೆಯ ವಿಶೇಷವನ್ನು ಹೇಳುತ್ತಿವೆ, ಟೈಮ್ ಪಾಸ್, ಬೋರ್ ಇಂಥ ಶಬ್ದಗಳನ್ನು ಇತ್ತೀಚೆಗೆ ಪ್ರಾಥಮಿಕ ಶಾಲಾ ಮಕ್ಕಳು ಕೂಡ ಹೇಳುತ್ತಾರೆ ಅಂದರೆ ಇಡೀ ವಾತಾವರಣ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬ ಕುರಿತು ಲೇಖಕಿಗಿದ್ದ ಮನುಷ್ಯ ಜೀವಿಯ ತಾತ್ವಿಕ ಚಿಂತನೆಗಳ ಕಳಕಳಿಯನ್ನು ಹೇಳುತ್ತಲೇ, ಜಾಗತೀಕರಣದ ಯುಗದಲ್ಲಿ ಮಡಕೆ ಮಾಡುವವ ಒಬ್ಬ ಕಲಾವಿದನಂತೆ ಕಾಣುವುದು ದೇಸೀ ಚಿಂತನೆಯ ಎಷ್ಟು ದೊಡ್ಡ ವಿಷಾದವಲ್ಲವೇ ಅನ್ನಿಸದೇ ಇರಲಾರದು, ಹಳ್ಳಿಮನೆಯ ಪ್ರಶಾಂತ ಅಂಗಳಕ್ಕೆ ಅಪರಿಚಿತ ಅಥವಾ ಪರಿಚಿತ ವ್ಯಾಪಾರಿ ಬಂದರೆ ಸಂತಸವೇ ನಲಿದಾಡುತ್ತಿತ್ತು ಎಂಬಲ್ಲಿ ಅಜ್ಜಿ ಬಣ್ಣಗೆಟ್ಟರೂ ಆಸೆಯಿಂದ ತೊಗೊಳ್ಳುವ ಬಿಟ್ರೂಟ್ ಬಣ್ಣದ ಸೀರೆಯೇ ನಮ್ಮೆಲ್ಲರ ಬಣ್ಣಗಳನ್ನೂ ಹಿಡಿದಿಟ್ಟಿವೆ.

ಇವರ ಹಲವು ಪ್ರಬಂಧಗಳ ಆರಂಭವು ಕತೆಯೊಂದರ ಭಾಗದಂತೆ ಶುರುವಾಗುತ್ತದೆ. ಅವುಗಳಲ್ಲಿ ’ತುಂಚನ್ ಕವಿಯ ನೆಲದಲ್ಲಿ ’ ಯೂ ಒಂದು. ನಮ್ಮ ಕನ್ನಡದ ಪಂಪನಂತೆ ಮಲಯಾಳಂ ನ ತುಂಚನ್ ಕವಿಯ ವಿಶೇಷತೆಯನ್ನು ಸುಂದರ ಕತೆಯಂತೆ ಸುಮಿತ್ರಾ ನಿರೂಪಿಸಬಲ್ಲರು, ಕೇರಳದ ಸಂಪ್ರದಾಯವನ್ನೆಲ್ಲ ಬಿಚ್ಚಿಡುವ ಪ್ರಬಂಧವಿದೆ. ಲೇಖಕಿಯ ಅನುಭವಗಳು ನಮ್ಮವೂ ಆಗುವ ಪ್ರಕ್ರಿಯೆಯಲ್ಲೇ ಓದಿನ ಸಾರ್ಥಕತೆ ಅಡಗಿದೆ.

ತೇಜಸ್ವಿ ನೆನಪಿನ ಚಿತ್ರಗಳನ್ನು ಕೊಡುತ್ತಾ ಸುಮಿತ್ರಾ, ತೇಜಸ್ವಿ ಏಳು ಎಂಟು ಸಲ ನೋಡಿದ ಸಿನೆಮಾ ’ರೋಮನ್ ಹಾಲಿಡೇ’ ಕುರಿತು ಹೇಳುತ್ತಲೇ, ಸಣ್ಣ ಊರಿನ ಮೌನ ಮತ್ತು ಏಕಾಂತದ ಬದುಕನ್ನು ಇಷ್ಟಪಡುವ, ಮುಖಸ್ತುತಿ ಮಾಡುವವರನ್ನು ಕಂಡರೆ ಬೇಸರ ಪಡುವ , ಸಾರ್ವಜನಿಕ ಭಾಷಣಗಳು ಇಷ್ಟವಾಗದ ತೇಜಸ್ವಿ ಹೇಳಿದ ದಾಂಪತ್ಯದ ಕುರಿತಾದ ಮಾತುಗಳು ವಿವೇಚನೆಯಿಂದ ಕೂಡಿದ್ದು.

ಮರಳಿ ಮಣ್ಣಿಗೆ ಬರಬೇಕಾದ ಕಾಲದಲ್ಲಿ ಮಳೆಯಲ್ಲೇ ಹಿಂಡಿಕೊಳ್ಳುವ ಲಂಗ , ಮಳೆಗೆ ಶರಣು ಹೋಗುವ ಅವರ ಇಡೀ ಮಲೆನಾಡ ಬದುಕಿನ ಚಿತ್ರಕ ಗುಣ ಅವರ ಬರವಣಿಗೆಯ ಶಕ್ತಿ ಕೂಡ ಆಗಿದೆ. ಲೇಖಕಿಯ ಆತ್ಮ ಚರಿತ್ರೆಯ ಮೊದಲ ಅಧ್ಯಾಯದಂತಿರುವ ಈ ಪ್ರಬಂಧ ತುಂಬ ಒಳಸುಳಿಗಳನ್ನು ಒಡ್ಲಲ್ಲಿಟ್ಟುಕೊಂಡಿದೆ.

ಚಿರಂತನ ಕಾಳಜಿಯ ವಿನಯವಂತ ಜಿ ಎಚ್ ನಾಯಕ ಎಂಬ ತಮ್ಮ ಪ್ರಬಂಧವೊಂದರಲ್ಲಿ ಸುಮಿತ್ರಾ,
ಮೌನವಾಗಿದ್ದೇ ತಮ್ಮ ನಡವಳಿಕೆಯಿಂದಲೇ ಮಾರ್ಗದರ್ಶನದಿಂದ ಮಾಡುವ, ’ಚಿರಂತನ ಕಾಳಜಿಯ ನಾಯಕರು’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ನಮ್ಮ ಕುಟುಂಬದ ಹಿತೈಷಿಗಳೂ ಆದ ನಾಯಕರ ಕುರಿತು ಬರೆಯುತ್ತ, ಪ್ರತೀ ಕ್ಲಾಸೂ ಮೊದಲನೇ ತರಗತಿ ಎಂಬಂತೆ ಅಧ್ಯಯನ ಮಾಡಿಕೊಂಡೇ ಕ್ಲಾಸಿಗೆ ಬರುತ್ತಿದ್ದ, ಮಾದರೀ ಅಧ್ಯಾಪಕ ಅನಿಸಿಕೊಂಡ, ಹಿರಿಯ ವಿಮರ್ಶಕರಾದ ಜಿ.ಎಚ್ ನಾಯಕರ ಬದುಕು ಬರಹಗಳ ಸಂಯಮವನ್ನು ಲೇಖಕಿ ತುಂಬ ಚೆನ್ನಾಗಿ ವಿವರಿಸಿದ್ದಾರೆ.

ರೈತರ ವ್ಯವಸಾಯದ ಲಾಭ ಪಡೆವ ಕಾನದ ಕೈಗಳ ಮಧ್ಯವರ್ತಿಗಳು ಮಾಡುವ ಕುತಂತ್ರಕ್ಕೆ ಬಲಿಯಾಗುವ ರೈತ ಬಂಧುಗಳ ಕಷ್ಟಗಳನ್ನು ಕೂಡ ಸುಮಿತ್ರಾ ತಮ್ಮ ಮಾನಸಿಕ ದಾರಿಯಲ್ಲಿ ಎಳೆದು ತರುತ್ತಾರೆ. ಇಂದಿನ ಹಳ್ಳಿಯ ಮಕ್ಕಳು ಎಂಜಿನಿಯರುಗಳಾಗಿ ಪಟ್ಟಣ ಸೇರುವ ನೋವನ್ನು ಸುಮಿತ್ರಾ ’ಗೋಕುಲ ನಿರ್ಗಮನ’ದ ಕೃಷ್ಣನಿಗೆ ಹೋಲಿಸಿ ಬರೆಯುತ್ತಾರೆ. ಕೃಷ್ಣ ಕೊಳಲು ಬಿಟ್ಟು ಮಥುರೆಗೆ ಹೋಗಿ ಚಕ್ರ ಹಿಡಿಯುತ್ತಾನೆ, ಗೋಕುಲದ ಬದುಕು ಬರಡಾಗುತ್ತದೆ, ಹಾಗೆಯೇ ನಮ್ಮ ಹಳ್ಳಿಗಳ ಬದುಕು, ಬುದ್ಧಿವಂತ ಮಕ್ಕಳೆಲ್ಲ ಪಟ್ಟಣ ಹಾಗೂ ವಿದೇಶ ಸೇರುತ್ತಾರೆ, ಇಂದಿನ ಕೃಷಿ ಪದ್ದತಿ ಬುದ್ಧಿವಂತ ಮಕ್ಕಳನ್ನು ಬೇಡುತ್ತಿದೆ. ಎಂಬ ಸುಮಿತ್ರಾ ಚಿಂತನೆಯಲ್ಲಿ ಹುರುಳಿದೆ. ಹಾಗೇ ಹಳ್ಳಿಗಳೂ ಕೂಡ ವಿದ್ಯಾವಂತ ಮಕ್ಕಳ ನಿರೀಕ್ಷೆಯನ್ನು ಪೂರೈಸುವಂತಿರಬೇಕು ಎಂಬ ಸುಮಿತ್ರಾ ಮಾತು ಲೇಖನದ ಸಮತೆಯನ್ನು ಕಾಪಾಡಿದೆ.

ತಾನು ಮೊದಲ ದಿನ ಶಾಲೆಗೆ ಹೋದ ಸಂದಿಗ್ಧವನ್ನು ಸಹ ಅವರು ನೆನಪಿಸಿಕೊಳ್ಳುತ್ತಾರೆ, ಮಲೆಯನ್ನು ನೆನೆಯುತ್ತ ಸುಮಿತ್ರಾ ಮಳೆಯ ಸದ್ದನ್ನು ಆಲಿಸಿ ಬರೆಯಬಲ್ಲವರು, ಹೆಂಚಿನ ಮೇಲೆ ಸಂಭವಿಸುವ ಲಯಬದ್ಧ ಮಳೆಸದ್ದು , ಇದ್ದಕ್ಕಿದ್ದಂತೆ ಜೋರು ಸುರಿಯುವ ಹೆಂಚಿನ ನೀರು, ಹೀಗೆ ತುಂಬ ಆಳವಾದ ಹಾಗೂ ವಿಸ್ತಾರವಾದ ರೂಪಕವನ್ನು ಹಿಡಿದುಕೊಡುತ್ತದೆ. ಇಲ್ಲಿ ಮಳೆಗಾಳಿಯಲ್ಲಿ ಉಪರಾಟೆಯಾಗುವ ಕೊಡೆಯ ಚಿತ್ರ ಅಷ್ಟೇ ಸಹಜವಾಗಿ ಬರುತ್ತದೆ.

ನೆನಪಿನ ಗಂಗೋತ್ರಿಯಂತೂ ಅವರ ಆತ್ಮಕಥೆಯ ಒಂದು ತುಣುಕಿನಂತಿದೆ, ಲೇಖಕಿ ಕಲಿಯುತ್ತಿದ್ದ ಸಮಯ ಸಂದರ್ಭದ ಪ್ರತೀ ವಿವರ ಮತ್ತು ಪರಿಸರ ಇಲ್ಲಿ ದೊರೆಯುತ್ತದೆ. ಸಿಟೀಗೆ ಹೋಗಿ ಮರಳುವಾಗ ೧೪ ನೇ ನಂಬರಿನ ಬಸ್ನಲ್ಲಿ ಟಿಕೆಟ್ ತೆಗೆದುಕೊಳ್ಳುವಾಗ ಗಂಗೋತ್ರಿ ಅಂತ ಹೇಳಲು ಹೆಮ್ಮೆಯಾಗುತ್ತಿತ್ತು ಎಂದು ಒಂದೆಡೆ ಬರೆಯುತ್ತಾರೆ ಲೇಖಕಿ. ಒಳಚೇತನವನ್ನು ಕಾಪಿಡುವ ಈ ಪರಿಯೊಂದು ಅಭಿಮಾನ ತರುವಂಥದ್ದು, ತಮ್ಮ ಕಾಲದ ಗಂಗೋತ್ರಿಯ ಚಿತ್ರಣವನ್ನು ಹಾಗೂ ಅದು ಈಗ ಬದಲಾದ ಸಂದರ್ಭದ ಸನ್ನಿವೇಶವನ್ನು ಲೇಖಕಿ ಒರೆಗೆ ಹಚ್ಚಿ ನೋಡುತ್ತಾರೆ. ಒಳಗಿನ ಶೃದ್ಧೆ ಹಾಗೂ ಆಸಕ್ತಿಗಳು ಮುಖ್ಯವೆಂದು ಹೇಳಿದ್ದು ಇಲ್ಲಿಯ ಬರಹದ ಆಪ್ತತೆಯನ್ನು ಹೆಚ್ಚಿಸಿದೆ.

ಸುಮಿತ್ರಾ ಅವರಿಗೆ ಈ ಲೋಕದಲ್ಲಿ ಅತ್ಯಂತ ಇಷ್ಟವಾದ ವಸ್ತುವೆಂದರೆ ಹೂ. ಜನರು ಕದ್ದ ಹೂಗಳನ್ನು ದೇವರಿಗಿಟ್ಟು ಪೂಜಿಸುವದು ಲೇಖಕಿಯ ಜೊತೆ ನಮ್ಮೆಲ್ಲರ ತಕರಾರೂ ಹೌದು ಅನಿಸುತ್ತದೆ.
ಕೆಲವರಿಗೆ ಹೂ ಗಿಡಗಳಲ್ಲಿ ಅರಳಿ ನಗುತ್ತಿದ್ದರೆ ವ್ಯರ್ಥ ಅಂತ ಅನ್ನಿಸುತ್ತದೆ, ಎಂಬ ಮಾತು ವಾಸ್ತವ ಪ್ರಜ್ಣೆಯನ್ನು ನಡುಗಿಸುವಂಥದ್ದು. ಇದು ಇಂದಿನ ಮನಸ್ಥಿತಿಗಳ ಮಿತಿಯೂ ಹೌದು, ಕೊನೆಗೂ ಮನೆಗೆ ಬರುವ ಬಂಧುಗಳು ಕೈಯಲ್ಲಿ ಎರಡು ಗಿಡ ಹಿಡಿದು ಬರುವ ಪದ್ದತಿ ಬೆಳೆದರೆ ಎಷ್ಟು ಚೆನ್ನ ಅಂತೆನಿಸದೇ ಇರದು.

13092164_1225327220812856_5657658805085661083_n

’ನನ್ನ ಅಜ್ಜಿಗೆ ಮನೆಯೇ ಜಗತ್ತು’ ತುಂಬಾ ಆಪ್ತವಾದ ಬರಹ. ಫಳ ಫಳ ಹೊಳೆವ ತಾಮ್ರದ ಬಿಂದಿಗೆ ಹೊತ್ತು ತರುವ ಅಜ್ಜಿಯ ನೆನಪಿನಲ್ಲಿ ನಮ್ಮನ್ನು ಮೀಯಿಸುವ ಶಕ್ತಿ ಸುಮಿತ್ರಾ ಅವರ ಪ್ರಬಂಧಗಳಿಗಿದೆ.
ಅಜ್ಜಿಗಳ ಹೆಸರಿನ ಜೊತೆ ಅವರ ಊರೂ ಸೇರಿರುತ್ತದೆ ಎಂಬುದು ಮಮತೆಯ ಭಿತ್ತಿಯನ್ನು ಅವಲೋಕಿಸುವಂಥದ್ದು. ಲೇಖಕಿಗೆ ಅವರ ಅಜ್ಜಿ ತಲೆ ಬಾಚಿ ಜಡೆ ಹೆಣೆದು ತುದಿಗೆ ಉಲ್ಲನ್ ದಾರವನ್ನು ಕಟ್ಟುವ ಚಿತ್ರ ಹಳೆಯ ಸಿನೆಮಾ ಮಗುವಿನ ರೂಪದಲ್ಲಿ ಆಪ್ತವಾಗಿದೆ.

ಉಪ್ಪಿನ ಕಾಯಿಯ ಮಿಡಿಯ ತೊಟ್ಟು ಇದ್ದರೂ ಸಾಕು ಬಟ್ಟಲು ಅನ್ನ ಉಣ್ಣಬಹುದು ಎಂಬ ಅಜ್ಜಿಯ ಜೀವದ ವಿನ್ಯಾಸಗಳು ನಮ್ಮೆಲ್ಲರೊಳಗೆ ಶಕ್ತಿ ಸಂಚರಿಸುವಂತೆ ಮಾಡಬಲ್ಲದು.
’ಅಜ್ಜಿಯ ಜೊತೆಗೆ ಆ ಜಗತ್ತು ಕಳೆದು ಹೋಯಿತು’ ಎಂಬಲ್ಲಿ ಬಾಲ್ಯವನ್ನೇ ಅಜ್ಜಿಯೆಂದು ವ್ಯಾಖ್ಯಾನಿಸುವ ರೀತಿ ಸೊಗಸಾಗಿದೆ, ಅಜ್ಜಿಯ ಹಸಿರು ರೇಶ್ಮೆ ಸೀರೆಯ ಗಟ್ಟಿಯಾಗಿದ್ದ ಸೆರಗಿನ ಭಾಗ ! ಅದು ಎಲ್ಲ ಮನೆ ಮಹಿಳೆಯರ ಮನದಲ್ಲೂ ಅಚ್ಚೊತ್ತಿ ನಿಲ್ಲುವಂಥದ್ದು.

ಬಾಲ್ಯದ ಶಾಲೆಯ ಚಿತ್ರಣದಲ್ಲಿ ಅಲ್ಲಿಯೂ ಗಿಡಮರಗಳು, ಹಸಿರುಗರಿಗಳು, ಕಾಡು, ಅಂಜೂರದ ಹಣ್ಣು, ಪ್ರವಾಸಕ್ಕೆ ಕೊಟ್ಟ ಒಂದು ರೂಪಾಯಿ, ಬಾಲ್ಯದ ಸಹಪಾಠಿಗಳೊಂದಿಗೆ ತಿಂದ ಮಸಾಲೆ ದೋಸೆ, ಶಾಲೆ ಎದುರಿನ ತೆಗ್ಗಿನ ಕೆರೆ , ಶಾಲೆಯ ಕೇರ್ ಉಪ್ಪಿಟ್ಟಿನಲ್ಲಿರುವ ಹುಳ, ಸಾವರ್ಕರ್ ಅಂಡಮಾನ್ ನಿಂದ ತಪ್ಪಿಸಿಕೊಂಡು ಬಂದ ಕತೆ ಹೇಳುವ ಹೆಡ್ಮಾಸ್ಟರ್ , ಹುಡುಗಿಯರು ತಿನ್ನುವ ನೆಲ್ಲಿಕಾಯಿ, ಅಕ್ಕಿ ರವೆ ಕಡುಬು ಕುರಿತು ಕೀಳರಿಮೆ ಮೂಡಿಸಿದ ಮಿಡ್ಲ್ ಸ್ಕೂಲ್ ಹೆಡ್ಮಾಸ್ಟರ್ , ಹೊಸದಾಗಿ ಅರಳಿದ ಅಂಗಳದ ಹೂಗಳ ಪರಿಮಳ, ಕಾಡಿನಿಂದ ಸೀದಾ ಅಂಗಳಕ್ಕೆ ಬಂದ ಗಿಡಗಳು , ಪ್ರತಿ ವರ್ಷ ಮೈ ತುಂಬ ಹೂ ತಳೆದು ತಮ್ಮ ಕರ್ತವ್ಯ ಪಾಲಿಸುವ ಮುತ್ತುಗದ ಮರಗಳು, ಅಂಗಳದ ಕುಂಡದಲ್ಲಿ ಬೆಳೆದ ಆರ್ಕಿಡ್ ಗಿಡದ ನವ್ಹೆಂಬರ್ ಹೂವು, ಎಳೆಗೆಂಪಿನ ಜತೆ ಹಳದಿ ಮಿಶ್ರಿತ ಹೂಗಳು ದಿನಕ್ಕೆರಡು ಅರಳಿದ ಪರಿ, ಹೂವೇ ಬಿಡದ ಸಸಿಗಳು ಕೂಡ ಸುಮಿತ್ರಾ ಅವರ ಅಂಗಳದಲ್ಲಿ ಬೇರೂರಿದ ತಕ್ಷಣ ಹೂ ಅರಳಿಸುವ ಸೋಜಿಗ, ಹಾಗೂ ಅಡಿಕೆ ಒಲೆಯ ನಿಗಿನಿಗಿಸುವ ಕೆಂಡದ ಎದುರು ಬೆಚ್ಚನೆ ಪರಿಸರದಲ್ಲಿ ಅಜ್ಜಯ್ಯನ ನೆನಪು, ’ಮಕ್ಕಳು ಚಳಿಕಾಯಿಸಬಾರದು, ರಕ್ತ ಸಂಚಾರ ನಿಧಾನವಾಗುತ್ತದ’ ಎಂಬ ಅಜ್ಜಯ್ಯನ ಮಾತು ತೀಕ್ಷ್ಣವಾಗಿ ತೆರೆದಿಡುವ ಆರೋಗ್ಯದ ನೀತಿ.. ಎಲ್ಲವೂ ಓದಿನ ಸಂದರ್ಭಕ್ಕೆ ತಂಗಾಳಿಯಂತೆ ಸುಳಿದು ಬರುತ್ತದೆ. ಮತ್ತು ತೀರ್ಥಹಳ್ಳಿಯನ್ನು ಒಂದು ನೆನಪಿನ ತುಣುಕಾಗಿ ನಮ್ಮಲ್ಲಿ ಉಳಿಸಿಬಿಡುತ್ತದೆ.

ಈ ಮನಸ್ಸಿನ ಜೊತೆ ಬಾಲ್ಯದ ಮೆಲುಕುಗಳ ಪಸೆ ಹಾಗೂ ಅಧ್ಯಾಪಕ ವೃತ್ತಿಯ ಆರ್ದ್ರತೆ ಜೊತೆಗೂಡಿರುವುದೇ ಸುಮಿತ್ರಾ ಅವರ ಜೀವ ಚೈತನ್ಯದ ಪಯಣಕ್ಕೆ ಮಹಾನ್ ಶಕ್ತಿಯಾಗಿ ಒದಗಿ ಬಂದಿರುವುದು ಓದಿನ ರುಚಿಯನ್ನು ಹೆಚ್ಚಿಸಬಲ್ಲದು ಕೂಡ. ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚು ಹೆಚ್ಚು ಬರೆಯಲಿ ಎಂದು ಮಮತೆಯಿಂದ ಆಶಿಸುವೆ. ಮೀಟರ್ ರೀಡರ್, ಫಾರೆಸ್ಟ್ ಗಾರ್ಡ್ ಯಾರೇ ಆದರೂ ಊಟ ಮಾಡಿಸಿ ಕಳುಹಿಸುತ್ತಿದ್ದ ಲೇಖಕಿಯ ಅಜ್ಜಿಯ ಮಾನವೀಯತೆ ನಮ್ಮೆಲ್ಲರನ್ನು ಕಾಯಲಿ , ಕಾಪಿಡಲಿ.

26166231_10208743983231469_6075369933549741981_n

 

 

Advertisements

ಅಪ್ಪಟ ಜೀವನ ಮೌಲ್ಯಗಳ ಕಾಪಿಟ್ಟ ವಿಜಯಮ್ಮನ ’ಕುದಿ ಎಸರು’

-ಸುನಂದಾ ಕಡಮೆ

IMG_20180101_211031

ಪಾವ್ಲೋ ಕೊಯೆಲ್ಲೋ ಹೇಳಿದಂತೆ ’ಕಣ್ಣೀರ ಹನಿಗಳು ಎಂದರೆ ಬರೆಯಲೇಬೇಕಾದ ಶಬ್ದಗಳು ಎಂದರ್ಥ’ ಅನ್ನುವ ಮಾತನ್ನು ಯೋಚಿಸಿದರೆ, ಮುಖ್ಯವಾಗಿ ಭಾರತೀಯ ವ್ಯವಸ್ಥೆಯಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಜೀವಿಸಿರುವ ಹೆಣ್ಣುಗಳ ಆತ್ಮ ಕಥಾನಕದ ಅಗತ್ಯಗಳನ್ನು ಬಿಚ್ಚಿಡಬಲ್ಲದು ಅನಿಸುತ್ತದೆ. ಈ ಹಿನ್ನೆಲೆಯಲ್ಲೇ ಕೆಲವು ಮಹತ್ವದ ಸ್ತ್ರೀಶಕ್ತಿಗಳಿಗೆ ನಾನು ಆತ್ಮಚರಿತ್ರೆ ಬರೆಯಿರಿ ಎಂಬ ಸಲಹೆ ಕೊಡಲು ಆರಂಭಿಸಿದ್ದೇನೆ. ನಮ್ಮ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಕ್ಕ ನಡೆಸುವ ಅನನ್ಯ ಮಹಿಳೆಯೊಂದಿಗೆ ಮಾತುಕತೆ ಕಾರ್ಯಕ್ರಮಕ್ಕೆ ಮೊನ್ನೆ ಆಗಮಿಸಿದ ಅಭಿನೇತ್ರಿ ನಿರೂಪಕಿ ಅಪರ್ಣಾ ಅವರಿಗೂ ಆತ್ಮಚರಿತ್ರೆ ಬರೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೆ, ಅದಕ್ಕಿಂತ ಮೊದಲು ಲಕ್ಶ್ಮೀಬಾಯಿ ಏಣಗಿಯವರು ಕಾರ್ಯಕ್ರಮಕ್ಕೆ ಬಂದಾಗಲೂ ಇದೇ ಮಾತನ್ನು ಹೇಳಿದ್ದೆ,

ನಾವು ಧಾರವಾಡದಲ್ಲಿ ನೆಲೆಸಿದ ಏಳು ವರ್ಷಗಳು ಅಮ್ಮ ಲಕ್ಷ್ಮೀಬಾಯಿ ಏಣಗಿ ನಮ್ಮ ನೆರೆಮೆನೆಯವರಾಗಿದ್ದರು. ಅಂಥದೊಂದು ಕಕ್ಕುಲಾತಿ ಹಾಗೂ ಸಲಿಗೆಯಿಂದಲೇ ಅವರ ಬದುಕಿನ ವಿವರಗಳನ್ನು ಅವರು ಹೇಳುತ್ತ ಹೋದರೆ ನಾನೇ ಕೂತು ನಿರೂಪಿಸುವೆ ಎಂಬ ಒತ್ತಾಯವನ್ನೂ ಮಾಡಿದ್ದೆ. ಅವರು ಒಪ್ಪಿಕೊಳ್ಳಲಿಲ್ಲ. ನಿಮ್ಮ ಸುತ್ತಲಿನವರ ಘನತೆಗೆ ಕುಂದು ಬರದ ಹಾಗೆ, ಅಂಥ ಸಂಗತಿಗಳನ್ನು ಸೂಕ್ಷ್ಮವಾಗಿ ಸಾಂಕೇತಿಕವಾಗಿ ನಿರೂಪಿಸುವೆ ಅಂತಲೂ ಹೇಳಿದ್ದೆ, ಹೋಗಲಿ, ನಿಮ್ಮ ಕಾಲದ ರಂಗ ಚಟುವಟಿಕೆಗಳ ಏಳು ಬೀಳುಗಳು, ಕಷ್ಟ ಕಾರ್ಪಣ್ಯಗಳ ಕುರಿತಾದ ನಿಮ್ಮ ಅನುಭವ ವಿಸ್ತಾರವನ್ನಾದರೂ ದಾಖಲಿಸೋಣ ಎಂದೆ, ’ನನ್ನ ಬದುಕು ಮತ್ತು ವೃತ್ತಿ ಎರ್ಡೂ ಬ್ಯಾರೆ ಬ್ಯಾರೆ ಅಲ್ಲ ಮಗಳ, ಅದು ಮತ್ತೂ ಅಲ್ಲಿಗೇ ಬಂದು ಮುಟ್ತೇತಿ, ಬ್ಯಾಡಾ’ ಅನ್ನುತ್ತ ಅಮ್ಮ ಲಕ್ಷ್ಮೀಬಾಯಿ ಏಣಗಿ ಅವುಗಳನ್ನು ಪುಸ್ತಕವಾಗಿ ದಾಖಲಿಸಲು ಮನಸ್ಸು ಮಾಡಲಿಲ್ಲ.’ಈಗ ಎಲ್ಲಾನೂ ಸುಮಧುರ ಭಾಂದವ್ಯದ ಹಂತದಾಗೈತಿ, ಹಿಂದಿನ ಸತ್ಯಗಳನ್ನ ಕೆದಕಿ ಏನ ಪ್ರಯೋಜ್ನ ಐತಿ, ಅವು ನನ್ನೊಂದಿಗೇ ಸತ್ತು ಹೋಗಲಿ’ ಎಂಬ ಅವರ ಹೃದಯ ವಿದ್ರಾವಕ ಮಾತು ನನ್ನನ್ನು ಯಾವತ್ತೂ ಕಾಡುವಂಥದು. ಇದಕ್ಕೆ ವ್ಯತಿರಿಕ್ತವೆಂಬಂತೆ ವಿಜಯಮ್ಮ ಈ ’ಕುದಿ ಎಸರು’ ಬರೆದು ಸತ್ಯ ಉಳಿಸುವ ದಿಟ್ಟತನವನ್ನು ಮೆರೆದಿದ್ದಾರೆ. ಈ ಕಾರ್ಯ ಕನ್ನಡ ಲೋಕ ಮೆಚ್ಚಿಕೊಳ್ಳಬೇಕಾದದ್ದೇ.

facebook_1514819044148 (1)

ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಆತ್ಮ ಚರಿತ್ರೆಗಳನ್ನು ಗಮನಿಸಿದರೆ, ಬರಹಲೋಕ ಮೆಲ್ಲಗೆ ಹೊಸ ಹೊರಳನ್ನು ಪಡೆದುಕೊಳ್ಳುತ್ತಿದೆ ಅನಿಸುತ್ತದೆ. ಐದೋ ಹತ್ತೋ ವರ್ಷಗಳ ಹಿಂದೆ ಕನ್ನಡದಲ್ಲಿ ಅದರಲ್ಲೂ ಮಹಿಳಾ ಆತ್ಮಚರಿತ್ರೆಗಳ ಕೊರತೆ ಕಂಡುಬಂದಿತ್ತು, ಈ ನಿಟ್ಟಿನಲ್ಲಿ ನಮ್ಮವರಿಗೆ ಪಕ್ಕದ ಮರಾಠಿ ಬರಹಗಾರರು ಮಾದರಿಯಾಗಬೇಕು ಎಂದೇ ವಿಮರ್ಶಿಸುವದಿತ್ತು, ಅದಕ್ಕೆ ಕಾರಣ ಎಲ್ಲರಿಗೂ ತಿಳಿದದ್ದೇ. ಅನುಭವಿಸಿದ ಬದುಕಿನ ಸತ್ಯವನ್ನು ಅಥವಾ ವೈಯಕ್ತಿಕ ಸತ್ಯಗಳನ್ನು ದಾಖಲೆಯಾಗಿ ತೆರೆದಿಡಲು ಹಿಂಜರಿಕೆ ಅಥವಾ ಮುಜುಗರ ಅಥವಾ ನನ್ನೆಲ್ಲ ಬರಹಗಳೂ ಆತ್ಮಕಥಾನಕಗಳೇ ಎಂಬ ನಂಬಿಕೆ. ಆದರೂ ಪ್ರತಿಭಾ ನಂದಕುಮಾರ, ಭಾರ್ಗವಿ, ಬಿ ಜಯಶ್ರೀ, ರಜನಿ ನರಹಳ್ಳಿ, ಶಶಿಕಲಾ ವೀರಯ್ಯಸ್ವಾಮಿ, ದು. ಸರಸ್ವತಿ ಇದೀಗ ವಿಜಯಮ್ಮ (ಇನ್ಯಾರಾದರೂ ಇದ್ದರೆ ಪಟ್ಟಿಗೆ ಸೇರಿಸಲಾಗುವುದು) ಮುಂತಾದವರು ಬರೆಯುವ ಧೈರ್ಯ ತೋರಿದ್ದಾರೆ, ಇನ್ನು ಕೆಲವರು ತಮ್ಮದು ಅನುಭವ ಕಥನ, ವೃತ್ತಿ ಜೀವನದ ನೆನಪುಗಳು ಅಂತಲೂ ಕರೆದುಕೊಂಡಿದ್ದಾರೆ.

ಇಡೀ ಜಗತ್ತಿನ ತಾಯಂದಿರು ಅನುಭವಿಸಿರುವ ನೋವು, ಸಂದಿಗ್ಧ, ದುಗುಡ, ಆತಂಕಗಳಿವು. ಅವಕ್ಕೆಲ್ಲ ವಿಜಯಮ್ಮನಂಥ ತಾಯಂದಿರು ದನಿಯಾಗಿದ್ದಾರೆ ಅಷ್ಟೆ. ಇದು ವಿಜಯಮ್ಮನ ಆತ್ಮಕಥನವಷ್ಟೇ ಅಲ್ಲ, ಮಹಿಳಾ ಸಂಕುಲದ ಶೇಕಡಾ ತೊಂಬತ್ತರಷ್ಟು ಹೆಣ್ಣುಗಳ ಆತ್ಮಕಥನ ಕೂಡ ಹೌದು. ಇದು ದೇಶದ ಎಲ್ಲ ಭಾಷೆಗಳಿಗೂ ಅನುವಾದಗೊಂಡು ಎಲ್ಲ ಭಾಷೆಗಳ ಹೆಣ್ಣುಮಕ್ಕಳೂ ಓದಬೇಕು ಎನ್ನುವುದು ನನ್ನ ಆಶಯ.

facebook_1514819586862 (1)

ವಿಜಯಮ್ಮ ತಮ್ಮನ್ನೇ ತಾವು ವಿಮರ್ಶೆಗೆ, ತಾತ್ವಿಕ ಚಿಂತನೆಗೆ ಒಡ್ಡಿಕೊಂಡಿರುವುದು ಕುದಿ ಎಸರಿನ ಪ್ರಾಮಾಣಿಕತೆ. ಅಲ್ಲಲ್ಲಿ ತತ್ವಜ್ಣಾನಿಗಳಂತೆಯೂ ತಮ್ಮ ಪಯಣದ ಅನುಭವಗಳನ್ನು ಹಾಗೂ ವಿಚಾರಗಳನ್ನು ಒರೆಗೆ ಹಚ್ಚಿ ವಿಶ್ಲೇಷಿಸಿದ್ದಾರೆ, ಇದು ಅಪಾರ ಜೀವನ್ಮುಖೀ ಸ್ಪಂದನೆಗಳಿರುವ ಕೃತಿ. ನಿರೂಪಣೆಯ ದೃಷ್ಟಿಯಿಂದ ಬಹಳ ಸಂಕೀರ್ಣ ಸ್ವಭಾವವುಳ್ಳ ಬರಹ.

ದುಃಖಕ್ಕೆ ಕಾರಣಗಳು ಹಲವಾರು, ಅದೂ ಮಹಿಳೆಯರಿಗೆ ಈ ವ್ಯವಸ್ಥೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಸಾಂಪ್ರದಾಯಿಕ ಮೂಢನಂಬಿಕೆಯ ಕಾರಣಗಳಿಂದ ಬರುವಂಥದು. ಸಂತೋಷದ ಮೂಲಗಳನ್ನು ನಾವೇ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ನಮಗೆ ಒದಗಿರುವುದಂತೂ ಸತ್ಯ, ಮನುಷ್ಯನನ್ನು ಸಂತೋಷವಾಗಿಡಬಲ್ಲ ಸಲಕರಣೆಗಳು ಈಗ ಹೆಚ್ಚಿವೆ, ಆದರೆ ಮನುಷ್ಯ ವ್ಯಷ್ಟಿಯಾಗಿಯೂ ಸಮಷ್ಟಿಯಾಗಿಯೂ ಸುಖವಾಗಿರಬಲ್ಲ, ನಮ್ಮನ್ನು ನಮ್ಮ ಕುಟುಂಬವನ್ನು ನಾವು ನಡೆಯುತ್ತಿರುವ ದಾರಿಯನ್ನು ಜೀವಿಸುತ್ತಿರುವ ಸಮಾಜವನ್ನು ಒಂದು ಕ್ಷಣ ಸರಿಯಾಗಿ ನೋಡಿದರೂ ಸಾಕು, ಗೊತ್ತಾಗಿಬಿಡುತ್ತದೆ.facebook_1514819161811 (1)

 

’ನಾನು ಸಂದಿಸುವ ಪ್ರತಿಮುಖದಲ್ಲೂ ಗುರುತುಗಳೇ’ ಬ್ಲೇಕ್ ಹೇಳಿದ್ದನ್ನು ಇಲ್ಲಿ ನೆನೆಯಬಹದಾದರೆ, ಹೆಣ್ಣಿನ ನಿಶ್ಯಕ್ತಿ ಮತ್ತು ವ್ಯಥೆಗಳ ಗುರುತುಗಳು ಅವಳ ನೆರಳುಗಳೇ ಆಗಿವೆ, ನಾವು ಭೇಟಿಯಾಗುವ ಮುಖದಲ್ಲಿ ಮಾತ್ರ ಕಾಣುವ ಗುರುತುಗಳಲ್ಲ ಅವು, ನಾವೇ ಕನ್ನಡಿಯಲ್ಲಿ ನೋಡಿಕೊಂಡಾಗಲೂ ಇವು ಎದ್ದು ಕಾಣುತ್ತವೆ, ಹಾಗಾದರೆ ಈ ಸಂಕಷ್ಟಗಳ ಪರಂಪರೆಗಳಿಗೆ ಕಾರಣಗಳೇನು? ನಮ್ಮ ಸುಖ ಸಂತೋಷವನ್ನು ನಮ್ಮಿಂದ ಕಸಿದುಕೊಳ್ಳುತ್ತಿರುವವರು ಯಾರು? ಈ ಪ್ರಶ್ನೆ ನಾವೆಲ್ಲರೂ ಎದುರಿಸಲೇಬೇಕು, ರಸೆಲ್ ಹೇಳುವಂತೆ ’ನಮ್ಮ ಹಲವು ತೆರನಾದ ವ್ಯಥೆಗಳಿಗೆ ಸಾಮಾಜಿಕ ವ್ಯವಸ್ಥೆಯೂ ಹಾಗೂ ವೈಯಕ್ತಿಕ ಮಾನಸಿಕತೆಯೂ ಕಾರಣ, ಆದರೆ ಈ ಮಾನಸಿಕತೆಗೆ ಬಹುಮಟ್ಟಿಗೆ ಕಾರಣವಾಗಿರುವುದು ಕೂಡ ನಮ್ಮ ಸಾಮಾಜಿಕ ವ್ಯವಸ್ಥೆಯೇ.

ಜಗತ್ತು ಸ್ತ್ರೀವಾದ ಎಂದರೆ ಮಾನವತಾವಾದ ಎಂದು ತಿಳಿದ ದಿನ ವ್ಯವಸ್ಥೆ ನಮ್ಮ ಕುರಿತು ಮಾತಾಡುವುದನ್ನು ನಿಲ್ಲಿಸಬಹುದು ಅನಿಸುತ್ತದೆ. ಅಮಾನವೀಯ ನೆಲೆಯಲ್ಲಿ ಅವಳ ಮೇಲೆ ಹೇರಲ್ಪಡುವ ದೌರ್ಜನ್ಯಗಳಿಗೆ ಏನು ಹೇಳುವುದು? ಇಲ್ಲಿ ಬದಲಾಗಬೇಕಾದವರು ಯಾರು? ಇದು ಇಡೀ ಮಹಿಳಾ ಸಂಕುಲದ ಮುಂದಿರುವ ಪ್ರಶ್ನೆಯಾಗಿದೆ.

facebook_1514819785971

ಒಂದು ಸಾಮಾಜಿಕ ಜಾಗೃತಿಯ ಪ್ರಜ್ಣೆ ನಮ್ಮಲ್ಲಿ ಮೂಡಬೇಕಿದೆ.ಸ್ವಾಭಿಮಾನ ಹೆಣ್ಣುಮಗಳನ್ನು ಮತ್ತು ವಿಚಾರವಂತ ಹೆಣ್ಣುಮಗಳನ್ನು ಸಮಾಜ ನೋಡುವ ರೀತಿಯಲ್ಲೇ ದೋಷವಿದೆ, ಸ್ತ್ರೀ ಚೇತನವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ, ಆತ್ಮಗೌರವವನ್ನು ತುಚ್ಛೀಕರಿಸಿ ಕಡೆಗಣಿಸಲಾಗುತ್ತಿದೆ, ಹೀಗೆ ಪುರುಷ ಪ್ರಧಾನ ಸಮಾಜದ ಈ ಅಪಕ್ವ ಮತ್ತು ಕ್ರೂರ ವ್ಯವಸ್ಥೆಯ ಜಾಲಗಳ ಕುರಿತು ಈ ಕೃತಿ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ.

ಕುಟುಂಬ ಸಂಬಂಧಗಳ ಆಳ ಅಗಲ ಸ್ವಾರ್ಥ ಸಣ್ಣತನಗಳೆಲ್ಲವನ್ನು ವಿಜಯಮ್ಮ ಒಂದು ತಣ್ಣನೆಯ ಸ್ವರದಲ್ಲಿ ಹೇಳಿದ್ದಾರೆ. ಮತ್ತೆ ಮತ್ತೆ ಗಾಯಗೊಳಿಸುವ ಘಾಸಿಗೊಳಿಸುವ ಪ್ರಕ್ರಿಯೆಗಳು ಅಸಹನೀಯವಾದಂಥವು, ಅವು ಈ ಬಾಲ್ಯದಾಚೆಯ ಕಾಲದಲ್ಲಿ ನಿಂತು ನೋಡಿದಾಗ, ಆತ್ಮ ಸಂವಾದಕ್ಕೆ ತೊಡಗಿಸುತ್ತದೆ, ಹಾಗಾಗಿ ವಿಜಯಮ್ಮ ತಮಗೆ ದಕ್ಕಿದ ಕಟು ಅನುಭವಗಳ ಜೊತೆಗೇ ಚಿಂತನೆಗಳನ್ನೂ ನಡೆಸಿದ್ದಾರೆ, ಇಲ್ಲಿ ಭಾರತೀಯ ಸಾಂಸ್ಥಿಕ ವ್ಯವಸ್ಥೆಯೊಳಗೆ ಹೆಣ್ಣೊಬ್ಬಳು ಅನುಭವಿಸಿದ ತಲ್ಲಣಗಳಿವೆ, ಇವರ ಅಕ್ಷರದೊಳಗೊಂದು ಅಂತಃಕರಣವಿದೆ.

facebook_1514819103286 (2)

ವಿಜಯಮ್ಮನ ಬರಹಕ್ಕೆ ಓದುಗರ ಭಾವಕೋಶವನ್ನು ಸರಳವಾಗಿ ಪ್ರವೇಶಿಸುವ ಶಕ್ತಿಯಿದೆ, ಕುಟುಂಬದ ಘನಘೋರ ಹಿಂಸೆಯನ್ನು ಸಹ್ಯವಾಗಿಸಿಕೊಳ್ಳುವಲ್ಲಿ ಹೆಣ್ಣೊಬ್ಬಳು ವಹಿಸುವ ಎಚ್ಚರ, ತಾಳ್ಮೆಯನ್ನು ಅಳೆಯುವ ಶಕ್ತಿ ಯಾವ ಅಕ್ಷರಗಳಿಗೂ ಇಲ್ಲವೆಂಬುದನ್ನು ಅರಗಿಸಿಕೊಳ್ಳುತ್ತಲೇ, ಸುಶಿಕ್ಷಿತವೆನಿಸಿಕೊಂಡ ಮಧ್ಯಮ ವರ್ಗದ ಕುಟುಂಬದೊಳಗಿನ ಸಾಂಸ್ಕೃತಿಕ ಸಂಕಟಗಳು ಬಹಳ ಸೂಕ್ಷ್ಮ ಮತ್ತು ಆಳವಾಗಿವೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇದನ್ನು ಅನುಭವಿಸುವ ಹೆಣ್ಣು ಜೀವದ ಮನಸ್ಸುಗಳು ಅತ್ಯಂತ ಸೂಕ್ಷ್ಮವಾಗಿದ್ದಾಗ ಅದರ ಪರಿಣಾಮ ಇನ್ನೂ ಕ್ರೂರವಾಗಿರುತ್ತವೆ.

ಜಗತ್ತಿನ ದೃಷ್ಟಿಯಲ್ಲಿ ಎಲ್ಲ ಸುಖೀ ಕುಟುಂಬಗಳೂ ಮರ್ಯಾದೆಯ ಮುಸುಕು ಹಾಕಿಕೊಂಡಿರುತ್ತವೆ ಎಂಬುದನ್ನು ಎಲ್ಲರೂ ಬಲ್ಲರು. ಯಾತನಾಮಯ ಬದುಕಿನಲ್ಲಿ ಹೆಣ್ಣು ಜೀವ ’ಇಲ್ಲದಂತೆ ಇರುವು’ ದನ್ನು ರೂಢಿ ಮಾಡಿಕೊಂಡಿದೆ, ಇಲ್ಲಿಯ ಹೆಣ್ಣಿನ ಬಾಲ್ಯವು ಗ್ರಾಮೀಣ ಪ್ರದೇಶದ ಕೌಟುಂಬಿಕ ವಾತಾವರಣದಲ್ಲಿ ಅರಳುತ್ತದೆ ಮತ್ತು ಆಕೆ ಪಡೆದ ಶಿಕ್ಷಣ ಇಲ್ಲಿ ಮುಖ್ಯವಾಗುತ್ತದೆ.

facebook_1514819835638

ಕನ್ನಡ ಮನಸ್ಸಿಗೆ ಒಂದು ಹೊಸ ಅನುಭವ ಲೋಕವೊಂದನ್ನು ಕಟ್ಟಿಕೊಡುವ ಕೃತಿಯಿದು, ಒಂದರ್ಥದಲ್ಲಿ ಇದು ಅಂದಿನ ಸಾಮಾಜಿಕ ಪರಿಸ್ಥಿತಿಗಳ ದಾಖಲೆಗಳೂ ಹೌದು, ಹೆಣ್ಣು ದಾಂಪತ್ಯದ ಪರಿಧಿಯೊಳಗೇ ಎದುರಿಸಬೇಕಾದ ಸಮಸ್ಯೆ ಮತ್ತು ಸವಾಲುಗಳು ಹಲವಾರು. ತಾಯಿ ಹಾಗೂ ಮಗಳು ಇಬ್ಬರ ಆತ್ಮ ಕಥಾನಕವೂ ಹೌದು ಅನಿಸುತ್ತದೆ. ವಿವೇಕ ವಿವೇಚನೆಯಿಲ್ಲದ ಪುರುಷನೊಬ್ಬನ ಪಾಶವೀತನವನ್ನು ನಿರ್ಭಿಡೆಯಿಂದ ಬಿಚ್ಚಿಟ್ಟಿದ್ದಾರೆ. ಇತರರ ಬದುಕಿನ ಕಹಿ ಸತ್ಯವನ್ನು ಬರೆದಷ್ಟೇ ನಿಷ್ಟುರವಾಗಿ ತಮ್ಮ ಚ್ಯುತಿ ನ್ಯೂನ್ಯತೆಗಳನ್ನು ವಿಮರ್ಶಿಸಿಕೊಳ್ಳುತ್ತಾರೆ,

ಇಲ್ಲಿ ’ತಿಟ್ಟತ್ತಿ ತಿರುಗಿ ನೋಡಿದಾಗ’ ಎಂಬ ’ಲೇಖಕಿಯ ಮಾತು’ ಗಳನ್ನೊಳಗೊಂಡ ಬರಹ ಕೂಡ ಆತ್ಮಕಥೆಯ ಒಂದು ಅಧ್ಯಾಯವೇ ಹೌದು. ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ಕವಿ ಕಥೆಗಾರ್ತಿ ಹೋರಾಟಗಾರ್ತಿ ವಿನಯಾ ಸವಣೂರಿನಲ್ಲಿ ಹಮ್ಮಿಕೊಂಡ ಶಿಬಿರಕ್ಕೆ ವಿಜಯಮ್ಮನನ್ನು ಕರೆಸಿ ಅನುಭವಗಳನ್ನು ಕೆದಕಿ ಮಾತಾಡಿಸಿದ ವಿವರಗಳಿಂದ ಶುರುವಾಗುವ ಈ ಆತ್ಮಕಥನ ೩೫೭ ರಷ್ಟು ಸುದೀರ್ಘ ಪುಟಗಳಲ್ಲಿ ಸವಿಸ್ತಾರವಾಗಿ ಹೆಣೆದುಕೊಂಡಿದೆ. ಶುರುವಿಗೇ ವಿಜಯಮ್ಮ ’ನಾನು ಬರೆದಿದ್ದರಲ್ಲಿ ಸ್ವಪ್ರತಿಷ್ಠೆ ತೂರಬಹುದು, ಅದನ್ನು ಮೀರಿಯೇ ಈ ಕೃತಿಯನ್ನು ಕಟ್ಟಬೇಕು’ ಎಂದುಕೊಂಡದ್ದನ್ನು ಇಲ್ಲಿ ಸ್ಮರಿಸಲೇಬೇಕು..

ಗಂಡನೆನ್ನುವ ಪ್ರಾಣಿ ನಡುರಸ್ತೆಯಲ್ಲಿ ಅಷ್ಟೇ ಆಕಸ್ಮಿಕವಾಗಿ ಹೆಂಡತಿಯ ಮೇಲೆ ದೌರ್ಜನ್ಯ ಎಸಗುತ್ತಿರುವಾಗ, ಅವಳ ಕೈಯಲ್ಲಿರುವ ಮಗನ ಪುಟಾಣಿ ಶೂ ಗಳನ್ನು ಅವಳು ಮಣ್ಣಿಗೆ ಬಿದ್ದು ಹೊಲಸಾದೀತೆಂದು ಜೋಪಾನ ಮಾಡುತ್ತಾಳಲ್ಲ, ಆ ಬಂಧದಲ್ಲಿರುವುದೇ ಇಡೀ ಕೃತಿಯ ವ್ಯವಧಾನ ಹಾಗೂ ಅನುಭವ ನಿಷ್ಠೆಗಳು ಅಡಗಿವೆ ಅಂತ ನನಗನ್ನಿಸಿದೆ. ಪುರುಷ ಸಂಹಿತೆಯೊಂದು ಹೆಣ್ಣು ಬದುಕಿನ ಸರ್ವೋನ್ನತ ಮೌಲ್ಯಗಳೆಂದು ಹೇಳಲಾದ ಸಹನೆ ತಾಳ್ಮೆಗಳಿಗೆ ಬೆಂಕಿಯ ಸ್ಪರ್ಶವಿರುವುದನ್ನು ಇಲ್ಲಿಯ ಬರಹದ ಸಹಜ ಹೂರಣವಾಗಿ ನಾವು ಅರ್ಥೈಸಿಕೊಳ್ಳಬೇಕು.

facebook_1514819502425 (1)

ಪತಿ ಈ ಪದದ ಬಗ್ಗೆ ’ಪತಿ ಗಂಡ ಇವೆಲ್ಲ ಹೇಳಲು ಯಾಕೋ ಇಷ್ಟವಾಗುವುದಿಲ್ಲ, ಆ ಶಬ್ದಗಳು ಯಾಕೋ ತುಂಬಾ ಒರಟಾಗಿವೆ ಅನಿಸುತ್ತದೆ’ಎಂಬಲ್ಲಿ ತಾನು ಪಡೆದಂಥ ನೋವಿಗೆ ಪ್ರತಿರೋಧದ ನೆಲೆಯಲ್ಲಿ ಲೇಖಕಿಗಿರುವ ಸ್ಪಷ್ಟತೆ ಎದ್ದು ಕಾಣುತ್ತದೆ. ಕತ್ತಿನಲ್ಲಿ ಮಾಂಗಲ್ಯ ಮುಖ್ಯವಲ್ಲವೆನ್ನಿಸದ ತನಕ ಭಾರತೀಯ ಹೆಣ್ಣುಗಳ ಪಯಣ ಹೀಗೆಯೇ ಮುಂದುವರೆಯುತ್ತದೆ ಅನಿಸುತ್ತಿದೆ. ಇಲ್ಲಿ ಮೊದಲ ರಾತ್ರಿಯ ಅನುಭವವನ್ನಂತೂ ಅಮ್ಮ ಭಯಂಕರ ಶನ್ನಿವೇಶಗಳಲ್ಲಿ ಕಟ್ಟಿಕೊಡುತ್ತಾರೆ, ಅದರ ವಾಸ್ತವದ ಪರಿಕಲ್ಪನೆಯೇ ತೀರ ಅಮಾನುಷವಾದುದು. ’ರಾತ್ರೆಗಳೆಂದರೆ ಭಯ, ಕಣ್ಣುಮುಚ್ಚುವ, ಉಸಿರುಗಟ್ಟಿ ಬಿದ್ದುಕೊಳ್ಳುವ, ಸ್ವರವೇ ಹೊರಬರದ ಮುಂದಿನ ಸ್ಥಿತಿಗೆ ಇದು ನಾಂದಿ’ ಎಂಬಂತಹ ಮಾತುಗಳು ಇಡೀ ಬದುಕಿನ ವೇದನೆಯನ್ನು ಸಾಂಕೇತಿಕವಾಗಿ ಹೇಳುತ್ತದೆ. ಕೃತಿಯ ತಾತ್ವಿಕ ಚೌಕಟ್ಟು ತಂದೆಯನ್ನು ಘನತೆಯಿಂದ ಕಾಪಾಡಿದೆ, ಆದರೆ ಪತ್ನಿಯ ವಿಷಯಕ್ಕೆ ಬಂದಾಗ ಆತನೂ ಕಾಮುಕನೇ. ಪ್ರಪಂಚದ ಎಲ್ಲ ಪುರುಷರೊಳಗೂ ಸುಪ್ತವಾಗಿರುವ ಒಂದು ಜಗತ್ತಿದೆ, ಭ್ರಾಮಕ ಪರದೆಯನ್ನು ಭೇದಿಸಿ ಅದರಾಚೆಗಿನ ಪ್ರಖರ ಸತ್ಯವನ್ನು ಅರಿಯಲು ಈ ಬರಹ ಸಹಾಯಕವಾದೀತು.

ಕಬಾರಗಟ್ ತಿನ್ನಲು ಆರು ಕಾಸು ಸಿಗುವುದಾದರೆ ಅಮ್ಮನ ಬಗ್ಗೆ ಚಾಡಿ ಹೇಳಲೂ ಹಿಂದೆ ಮುಂದೆ ನೋಡದ ತಮ್ಮ ಉದಾಸೀನತೆಯನ್ನು ನೆನಪಿಸಿಕೊಳ್ಳುತ್ತಲೇ ಲೇಖಕಿ ’ಅಮ್ಮನಿಗೆ ಆಪ್ತರಿಲ್ಲ, ಅವಳ ನೋವು ಗುಟ್ಟು ಎಲ್ಲ ಅವಳ ತುಳಸೀ ಕಟ್ಟೆ ಉರಿವ ಒಲೆ ಹಿಂದಿನ ಮಸಿ ಗೋಡೆಗೆ ಮಾತ್ರ ಅನ್ನುವಾಗ ಕುಟುಂಬದಲ್ಲಿ ಅಮ್ಮನಿಗಿಲ್ಲದ ಗೌರವಕ್ಕಾಗಿ ಮನಸ್ಸು ಮುದುಡುತ್ತದೆ. ತಾವು ತೊಡುವ ಬಿಳೀ ಬಟ್ಟೆ, ದೊಡ್ಡಕುಂಕುಮದಿಂದ ಹಿಡಿದು, ಶ್ರಾದ್ಧಕ್ಕೆ ಊಟಕ್ಕೆ ಬರುವ ಬ್ರಾಹ್ಮಣರು ನೀಡಿಕೊಳ್ಳುವ ತುಪ್ಪದವರೆಗೆ, ತಮಗೆ ದೆವ್ವ ಮೆತ್ತಿಕೊಂಡ ಸಂದರ್ಭವನ್ನು ಲೇಖಕಿ ವಿಡಂಬನೆಯೊಂದಿಗೆ ಹೇಳುತ್ತಾರೆ, ಅದರ ಜೊತೆಜೊತೆಗೇ ಲೇಖಕಿಯ ಅಮ್ಮನ ತೊಂದರೆಗಳು ಅಸಹಾಯಕತೆಗಳು ಒಂಟಿತನಗಳು ಮನಕರಗಿಸುವಂಥದ್ದು.

10533815_1561227747455622_1857372529698795002_n

ಲೇಖಕಿಯ ತಾತನ ಅಣ್ಣ ಹೊಸದುರ್ಗದ ಅಪ್ಪೂ ಶಾಸ್ತ್ರಿಗಳು ತಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷಣವಾದ ಹೆಂಗಸೊಬ್ಬಳ ವಿಚಾರದಿಂದ ಹಿಡಿದು ಮುಂದೆ ತಂದೆ ಹಾಗೂ ಪತಿಯ ಜೀವನ ವಿನ್ಯಾಸದ ವರೆಗೆ ಅಂದರೆ ಮೂರು ತಲೆಮಾರುಗಳು ಸ್ತ್ರೀಯರನ್ನು ನಡೆಸಿಕೊಂಡ ರೀತಿಗಳನ್ನು ಈ ಕಥನ ಹಿಡಿದಿಟ್ಟಿದೆ. ಅದರ ಜೊತೆಜೊತೆಗೇ, ಲೇಖಕಿಯ ಬಾಲ್ಯದ ಆಟಪಾಟಗಳು, ಅಗಲಿದ ತಮ್ಮನ ನೆನಪುಗಳು, ತೀರ ಬಡತನದಲ್ಲಿ ಬದುಕಿದ ಅಮ್ಮನೊಂದಿಗಿರುವ ದಿನಗಳು, ಅಂದಿನ ಆಹಾರ ಪದ್ದತಿಗಳು, ಪೌರೋಹಿತ್ಯದ ಜೊತೆಗೆ ಹೋಟೆಲ್ಲುಗಳಲ್ಲಿ ಲೆಕ್ಕ ಬರೆಯುವ ಕೆಲಸ ಮಾಡುವ ಅಪ್ಪ ಅತಿಯಾದ ಓಸಿಯಾಟಕ್ಕೆ ಬಲಿಯಾದುದು, ಬಾಲ್ಯದ ದಿನಗಳನ್ನು ತುಂಬ ಅವಮಾನದಲ್ಲಿ ಕಳೆದ ಸಂದರ್ಭಗಳು, ಈಜು ಕಲಿತದ್ದು, ಅಮ್ಮನ ರಾಮಪೂಜೆ, ಚಾಡಿ ಹೇಳುವ ಕಲೆಗೆ ಅಮ್ಮನಿಂದ ಪಡೆದ ಪೆಟ್ಟು, ಎಣ್ಣೆನೀರು ಹಾಕಿಕೊಳ್ಳುವ ಸಂಭ್ರಮ, ದಾವಣಗೆರೆ, ಬೆಂಗಳೂರು ಅಂತೆಲ್ಲ ಕಳೆದ ಬಾಲ್ಯ, ಬಿಸಿ ಪದಾರ್ಥ ಮೈಮೇಲೆ ಚೆಲ್ಲಿಕೊಂಡು ಆದ ರಾದ್ಧಾಂತ, ಮುಂದೆ ಅನ್ನ ಮಾಡಲು ಕಲಿತ ಗಳಿಗೆ, ತಮ್ಮನೊಬ್ಬ ಹುಟ್ಟಿದ ಕೂಡಲೇ ಮನೆಯಲ್ಲಿ ತುಂಬಿಕೊಂಡ ಸಂಭ್ರಮ ಹಾಗೂ ತಮ್ಮನೊಂದಿಗಿನ ಆಟಪಾಟಗಳು, ನೆರೆಮನೆ ಹುಡುಗನೊಂದಿಗೆ ಪಡೆದ ಮೊದಲ ಮುತ್ತು, ವಿಪರೀತ ಉದ್ದ ತಲೆಗೂದಲು, ಮರದ ಬಾಚಣಿಗೆಯಲ್ಲಿ ಬಾಚೋ ಹೇನುಗಳು, ಜೂಲಿಯಸ್ ಸೀಝರ್ ನಾಟಕದ ಕತೆ ಹೇಳುವ ತಮ್ಮ ನಿಂದ ಹಿಡಿದು ’ಬೆಣ್ಣೆ ತುಪ್ಪ’ ವನ್ನು ಪದ ಅದಲು ಬದಲು ಮಾಡಿ ಹೇಳಿ ಎನ್ನುವ ತುಂಟ ಅಪ್ಪನ ಕುರಿತು, ಚಿಕ್ಕಮ್ಮ ಕೈಯಲ್ಲಿದ್ದ ಬಳೆ ತೆಗೆದು ಮಾರಲು ಕೊಟ್ಟದ್ದು, ಕಲಿತ ಕಸೂತಿಯಿಂದ ಹಿಡಿದು ಹೊಸಪೇಟೆಯಲ್ಲಿ ಕಳೆದ ದಿನಗಳು, ಮದುವೆಯಲ್ಲಿ ತಾತ ಮಾಡಿಸಿದ ವಜ್ರದ ಪುಟ್ಟ ಮೂಗುತಿಯಿಂದ ಹಿಡಿದು ಅದು ಚಿಕ್ಕಮ್ಮನ ಪಾಲಾದದ್ದು, ತನ್ನ ಮದುವೆಯ ತಯಾರಿಗೆಂದು ಉಪ್ಪಿನಕಾಯಿ ಹಾಕಲು ತಾನೇ ಹಸಿಖಾರ ಕುಟ್ಟಬೇಕಾದ ಪರಿಸ್ಥಿತಿ, ಇವುಗಳೆಲ್ಲ ಅತ್ಯಂತ ಸಹಜವಾಗಿ ಮೂಡಿಬಂದಿದೆ. ತನ್ನಿಬ್ಬರು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ ರೀತಿಯನ್ನು ಹೇಳುತ್ತಲೇ ನಂತರ ಪತ್ರಿಕೆಗಳಲ್ಲಿ ವೃತ್ತಿ ಜೀವನ ಕಟ್ಟಿಕೊಂಡು ಬರವಣಿಗೆ ಆರಂಭಿಸಿ ಪ್ರತ್ಯೇಕವಾಗಿ ಬದುಕು ಕಟ್ಟಿಕೊಂಡ ಕಥನವು ಹೃದಯಂಗಮವಾಗಿ ಮೂಡಿದೆ.

11891422_1646117765633286_4525062594966598946_o

ವಿಜಯಮ್ಮ ಅವರನ್ನು ನಾನು ಮೊದಲು ಕಂಡದ್ದು ೨೦೦೧-೨೦೦೨ ರ ಹೊತ್ತಿಗೆ ಜಯಂತ ಕಾಯ್ಕಿಣಿ ಈ ಟೀವಿಯಲ್ಲಿ ನಡೆಸಿಕೊಡುತ್ತಿರುವ ನಮಸ್ಕಾರ ಸಂದರ್ಶನ ಸಿರೀಸ್ ನಲ್ಲಿ. ಆಗಲೇ ಜಯಂತಣ್ಣ ಆತ್ಮಕಥನವನ್ನೇನಾದರೂ ಬರೆಯುವ ಇರಾದೆ ಇದೆಯೇ ಅಂತ ಕೇಳಿದ ನೆನಪು. ಹೀಗೆ ಸ್ವಂತ ನೋವು ನುಂಗಿ ಜಗತ್ತಿಗೆ ಶಾಂತಿಯನ್ನೂ ಪ್ರೀತಿಯನ್ನೂ ನಗುವನ್ನೂ ಕರುಣಿಸಿದ ಉದಾಹರಣೆಗಳು ನಮ್ಮ ಎದುರಿಗಿವೆ. ಇಂಥ ಅನುಭವಗಳ ದಾಖಲೆಗಳು ಅಸಂಖ್ಯಾತ ಅಸಹಾಯಕ ಓದುಗ ಮಹಿಳೆಯರಿಗೆ ಬದುಕುವ ಶಕ್ತಿಯನ್ನು ಕೊಡುವಂಥದು. ಹಾಗೆ ವಿಜಯಮ್ಮನ ಈ ’ಕುದಿ ಎಸರು’ ಸಾರ್ಥಕ ಕೃತಿ.

ಒಬ್ಬ ಅಪೂರ್ವ ತಾಯಿಯಾಗಿ, ಕೆಲವು ಪತ್ರಿಕೆಗಳಲ್ಲಿ ದುಡಿಯುವುದರ ಮೂಲಕ ಪತ್ರಕರ್ತೆಯಾಗಿ, ಸಾಂದರ್ಭಿಕ ಬೃಹತ್ ಗ್ರಂಥಗಳ ಸಂಪಾದಕಿಯಾಗಿ, ಪ್ರಕಾಶಕಿಯಾಗಿ, ಗ್ರಂಥ ಮುದ್ರಕಿಯಾಗಿ ನಾಟಕಕಾರ್ತಿಯಾಗಿ, ಸಿನೆಮಾ ವಿಮರ್ಶಕಿಯಾಗಿ, ಅಸಹಾಯಕ ಮಹಿಳಾಪರ ಸಂಘಟನೆಗಳ ಮೂಲಕ ಹೋರಾಟಗಾರ್ತಿಯಾಗಿ, ಬರಹಗಾರ್ತಿಯಾಗಿ ಹೀಗೆ ಹಲವು ಆಯಾಮಗಳಲ್ಲಿ ವಿಜಯಮ್ಮನ ಕೊಡುಗೆ ಕನ್ನಡಕ್ಕೆ ಸಂದಿದೆ. ಮುಂದಿನ ದಿನಗಳಲ್ಲಿ ಬರೆಯಲಿರುವ ವಿಜಯಮ್ಮನ ವೃತ್ತಿಜೀವನದ ಅನುಭವಗಳನ್ನು ಹೊತ್ತ ’ಜೀವಗಾಳು’ ಬರಹವನ್ನು ಕನ್ನಡ ಮಾನಸ ಲೋಕ ಬೆರಗು ಕಂಗಳಿಂದ ಕಾಯುತ್ತಿದೆ. ಆದಷ್ಟು ಬೇಗ ಹೊರಬರಲಿ ಎಂಬುದು ನನ್ನ ಮಮತೆಯ ಹಾರೈಕೆ.

ಈ ಬಾರಿ ನಮ್ಮ ’ಕಾವ್ಯ ಸಮಷ್ಟಿ’ ಯಲ್ಲಿ, ಕನ್ನಡದ ಅಪರೂಪದ ಕವಿ ಕೆ ಪಿ ಮೃತ್ಯುಂಜಯ ಅವರ ಮುಟ್ಟಿದರೆ ಮಿಡಿಯುವಂಥ, ತಾಕಿದರೆ ಕಂಪಿಸುವಂಥ ಬಹುಸೂಕ್ಷ್ಮವೂ ಹರಿತವೂ ಆದ ಐದು ಹೊಸ ಕವಿತೆಗಳು..

14563452_137354060068622_8907801413525864754_n

ಮಾಸದ ಚಿತ್ರ
-೧-
ಕಾಣದತ್ತ ಕಣ್ಚಾಚುವೆ
ಬೆಳೆವ ದಿಟ್ಟಿಗೆ ದಿಕ್ಕಿಲ್ಲ, ದಿಕ್ಕಿಲ್ಲ
ದಂತವಗೆ
ಬರಿಯ ಬಯಲು

ಎಲ್ಲಿ ನೀನಿಲ್ಲ ?
ಇರುವಲ್ಲಿ ಏನೆಲ್ಲ; ಇರದಲ್ಲಿ ಏನೆಲ್ಲ
ಅದುವು ನೀನೇ ಆಗಿ
ನೀನಿಲ್ಲ ಎಲ್ಲಿ ?

ಇಳಿವ ಮಳೆ ಹರಿವ ಹೊಳೆ
ಅದು ನಿನ್ನ ಹೆಸರು, ಹೊಂಬಾಳೆ
ಸಿರಿಯು
ಯಾವ ಘನ ಸಂಗತಿಗೂ ಒಪ್ಪುವ ನೀನು
ನನ್ನಯ ಪ್ರಾಣವಾಯು

ನಿನ್ನ ನಗೆ ಬಗೆ ತೋರುವ
ವದನ ಒಪ್ಪುತ ನೆನೆವವನ
ಕಣ್ಣಲ್ಲಿ ಬೆಳಕಾಗಿ ನಗುವೆ
ನೀನಿಲ್ಲ ಎಲ್ಲಿ ?

ಈ ಜಗವು ತೋರುವ ದಾರಿಗಿಲ್ಲ ಮುಗಿತಾಯ
-ಅದುವೆ ನೀನು
ಬಾನು ಬಿಚ್ಚುವ ಹಗಲು ಮುಚ್ಚುವಿರಳಲಿ ನೀನು
ಬಾನು ಮೆಚ್ಚುವ ಭುವಿಯು ನೀನು
ಕಟ್ಟಕ್ಕರೆಯಲಿ ಕರೆದ ನನ್ನಲಿ
ನೀನು ಎಲ್ಲಿಲ್ಲ ಹೇಳುತಾಯಿ
-೨-
ಈ ಹೂಗೀತ ಅಮ್ಮ ಅನ್ನಿಸಿ ನಾನು ಮೌನ.

**

19748589_313836509087042_447907480610701465_n

ಕೊನೆಯಿರದ ದಾರಿಯಿಂದ

ಕಳೆದ ಕಾಲ ಮರು ಬರಬಹುದೆಂಬ
ಆಸೆ ನಲಿವ ಮನಕೆ

ಕೊನೆಯಿರದ ದಾರಿಯಿಂದ
ಕರೆವ ಕೈ
ಯಾರಿಗೂ ದಿಕ್ಕಾಗುವುದು

ಉಳಿವ ಸದ್ದು
ಹೃದಯವ ಕಾಪಾಡುವುದು-

ನೆಚ್ಚಿಯೇ ತಾನೇ
ನಮ್ಮ ಹಾಡು?

**

14702377_118008122003216_1269331673442958405_n

ನಾಳೆಯ ನಾಳೆಯ ನಾಳೆಯ

ನೆನಪ ತೋಯಿಸುವ ಮಳೆ
ಎಲ್ಲೋ ಬೀಳುತ..

ಇಲ್ಲಿ ತಂಗಾಳಿ!

ಯಾರೂ ಬಯಸುವಂಥ ಮಾತಲಿ
ಎಷ್ಟು ಕಾಲದ ಖನಿ!

ಮನವಲ್ಲ –
ಹಿಂದ ಮುಂದಕೆ ತೂಗುವ
ಉಯ್ಯಾಲೆ
ತೂಗಾಡುವ ಉಯ್ಯಾಲೆ
ಎಲ್ಲರಲಿ

ಚಾಚುವ ಕೈಯಲಿ
ಕನಸ ಉಲಿ-
ನಾಳೆಯ ನಾಳೆಯ ನಾಳೆಯ

**

15400457_178611265942901_3367996363287875769_n

ತಾಯಿ

-೧-
ನೀನು ಮುಗಿಯದ ಜೀವ ; ಬೆಳಕು
ಒಳಗಿಳಿಯುತ್ತಲೇ ಇರುವ ಬೇರು

-೨-
ಎಲ್ಲ ಸದ್ದುಗಳಾಚೆ ತಣ್ಣಗೆ ಉಳಿದ ದನಿ
ಸೋಕುವಾತುರದ ಈ
ಬೆರಳ ಕಂಪನದಿ
ನಿನ್ನುಸಿರ ಬನಿ

ಹಗಲು ಹಗಲಾಗದೆ ಇರುಳು ಇರುಳಾಗದೆ
ಏಸೊಂದು ಏರುಪೇರು!
-ನೀಯಿರದೆ ರೂಬು ರೂಬು

ಇರುವೆ ಯಾವ ಎಡೆಯನು ಬಿಡದೆ
ನನ್ನೊಳ ಹೊರಗೆ-
ತಾಯಿ-
ಗಂಗಾಮಾಯಿ
ಘನ ನೆನವಿನಲಿ ಮರು ಮರು
ಬಾಳುವ ಬೆಳಗು ನನ್ನೊಳಗು ನೀನು

ಒಗಟ ಸೊಲ್ಲಲಿ ಗುಣವಿಟ್ಟು ನಡೆದೆ
ಹೆಜ್ಜೆ ಗುರುತಲಿ ಬಿಟ್ಟೆ ಕಾಲದ ರಂಗೋಲಿ

ಹಸಿವು ಅವಮಾನ ಸಿಟ್ಟು ಸೆಡವು
-ಅದು ನೀನು

ಯಾವುದಲ್ಲ ನೀ ನನಗೆ ಕೊಡದುದು?
ಯಾವುದಲ್ಲ ನೀನಗೆ ಇಡದುದು?

ಇರುವೆ ಸಾಲಿನ ತೆರದಿ ಬರುವ ನೆನವನು
ತಡೆದು
ಮಣ್ಣಲಿ ದೊಡ್ಡಮ್ಮ ದೇವತೆಯ ಅಯ್ಯನು
ತಿದ್ದಿದ ತೆರದಿ ತಿದ್ದುವೆನು ಓ ಮುಗುದೆ,
ಹೇಳು ನೀನಲ್ಲದೇ ದೇವರು ಇನ್ನಾರು?
ನನಗಿನ್ನಾರು ಹೇಳು- ಅಮ್ಮ- ನೀನಲ್ಲದೆ,
ನನಗೆ ದೇವರಂತೆ ತೋರು.

**

1531732_1561223744122689_5679621893899910938_o

 

ಇತರೆಯವನು ನಾನು

ಇತರೆಯವನು ನಾನು
ನಾನು ಇತರೆಯವನು

ಬ್ರಾಹ್ಮಣೇತರ ಕ್ಷತ್ರಿಯೇತರ ವೈಶ್ಯೇತರ
ಶೂದ್ರೇತರ ಇನ್ನೂ ಇತರೆಗಳ
ಕೂಡಿಕೊಳ್ಳದ ಇತರೆಯವನು

ಒಪ್ಪರು ಯಾರೂ ನನ್ನನು
ಒಪ್ಪವಾಗಿ ನಾನೇ ನಾನಾಗಿ ಇರುವೆನು

ಒಗ್ಗುವ ಮನಸ ಅರಸಿ ಹೋಗುವೆನು
ಮೊದಲ ಪ್ರಿಯತಮೆಗೆ
ಇತರೆವನು ನಾನು
ಮುಂದೊದಗಿದವರಿಗೂನು

ನಿತ್ಯವೂ ಚರಿತ್ರೆಯ ಬದುಕುತ
ಸದ್ಯದ ಸತ್ಯವ ಹುಡುಕುವೆ
ಪುರಾಣ ಕೂಪಕೆ ಸೇರದೆ
ಅಲಾಯದ ನಿಂತೇ ನಿಲ್ಲುವೆ

ಗೊತ್ತಿರುವುದು ಪ್ರೀತಿ ಮಾತ್ರ
ಗೊತ್ತಿಲ್ಲದುದು ಅದೇನೆ
ಇಲ್ಲಿರಲಿ ಅದು ಮಾತ್ರ

ತಥಾಗತ ಬಸವ
ಬಾಪು ಅಂಬೇಡ್ಕರ
ಇಂತಾದರು ಇತರೆಯವರೇ
ಇಲ್ಲಾಗಲಿ ಸಂತೆ ಅವರದ್ದೇನೆ

**

11215106_1615164628728600_6754131400369729295_n

 

 

’ಕಾವ್ಯ ಸಮಷ್ಟಿ’ ಯಲ್ಲಿ ಈ ವಾರ ಕವಿಯೂ ಅಂಕಣಕಾರ್ತಿಯೂ ಹೈಸ್ಕೂಲ್ ಶಿಕ್ಷಕಿಯೂ ಉತ್ತರಕನ್ನಡ ಜಿಲ್ಲೆಯ ಕಾಡಿನ ಸುಪುತ್ರಿಯೂ ಆಗಿರುವ ಶ್ರೀದೇವಿ ಕೆರೆಮನೆ ಅವರ ಐದು ಕವಿತೆಗಳು..

1277926_508429319247081_1174777423_o.jpg

ರಾವಣಾಯಣ

ಮತ್ತೆ ಬಂದ ರಾವಣ
ಚರಿತ್ರೆಯ ಪುಟದೊಳಗಿಂದಲೇ
ಸೀತೆಯ ತಟ್ಟಲಿಲ್ಲ, ಮುಟ್ಟಲಿಲ್ಲ
ಕೊನೆಗೆ ಮೋಹಿಸಲೂ ಇಲ್ಲ

ತಣ್ಣಗೆ ಸೀತೆಯೆದುರು ಕುಳಿತು
ಶತಶತಮಾನದ ಕಥೆ ಹೇಳಿದ
ನಿರಂತರ ಕುಗ್ಗಿಸಿದ ಅವಮಾನ, ದುಃಖ
ವಿವರಿಸಿದ ಗದ್ಗದ ಕಂಠದಲ್ಲಿ

ಕಾಡನ್ನು ಕಿತ್ತು ನಾಡಾಗಿಸುವ
ನಾಗರಿಕ ಪ್ರಯತ್ನದಲ್ಲಿ
ನೆಲ, ಜಲ ಕಳೆದುಕೊಂಡ ತನ್ನವರ
ವೇದನೆಯ ಎದೆಯೊಳಗಿನ ಹಾಡಾಗಿಸಿದ
ಬೀದಿಗೆ ಬಿದ್ದವರ ಕಥೆ ಹೇಳಿದ

ಹವಿಸ್ಸಿನ ಹೆಸರಲ್ಲಿ ಅಗ್ನಿಕುಂಡದಲಿ
ದಹದಹಿಸಿ ಆಕ್ರಂದಿಸಿದವರ
ನೋವಿನ ಚೀತ್ಕಾರವ ಅರುಹಿದ
ಬಲಿಯಾದವರ ನೆನಪಲ್ಲಿ ಕಣ್ಣೀರು ಮಿಡಿದ

ತಮ್ಮ ನೆಲ ಕಳೆದುಕೊಂಡ
ಮಾವ ಮಾರೀಚ, ಸುಬಾಹು
ಬದುಕುವ ಹಕ್ಕನ್ನು ಕೇಳಿದ ತಪ್ಪಿಗೆ
ರಾಮನ ಬಾಣಕೆ ಬಲಿಯಾದುದನ್ನು
ಹನಿಗಣ್ಣಾಗಿ ಉಸುರಿದ
ಬಿಕ್ಕಳಿಸಿ ಬಿಕ್ಕಳಿಸಿ ತತ್ತರಿಸಿದ

ಮೇಲ್ಜಾತಿಯ ರಾಮನನ್ನು ಮೋಹಿಸಿ
ಕಣ್ಣು, ಕಿವಿ, ಮೂಗು, ಮೊಲೆಯ
ಕತ್ತರಿಸಿಕೊಂಡು ವಿಕಾರವಾದ ತಂಗಿ
ಶೂರ್ಪನಖಿಯ ಎದುರು ತಂದು ನಿಲ್ಲಿಸಿದ
ತಂಗಿಯ ನೋವಿಗೆ ಹತಾಶನಾದ

ಈಗ ಸೀತೆ ಬಿಕ್ಕುತ್ತಿದ್ದಾಳೆ
ನಯವಾದ ಮಾತಿನ ವ್ಯಗೃತೆಗಾಗಿ
ಹರಿತ ತಲವಾರು ಹರಿಸಿದ
ರಕ್ತದ ತೋಡಿಗಾಗಿ
ನಾಗರಿಕನ ಅನಾಚಾರಕ್ಕಾಗಿ

ಸೀತೆಯ ಕಣ್ಣಲ್ಲಿ ಈಗ ರಾಮ ರಾವಣನಾಗುತ್ತಿದ್ದಾನೆ
ರಾವಣ ವಾತ್ಸಲ್ಯಭರಿತ ತಂದೆಯಾಗಿದ್ದಾನೆ

10371454_1709040056007723_6914904768413442818_n

ಪುಟ್ಟ ಕುಂಡದ ಬದುಕು

ಪುಟ್ಟ ಕುಂಡದೊಳಗೆ ತರೇಹವಾರಿ ಗಿಡಗಳು
ಕಾಮನಬಿಲ್ಲು ಧರೆಗಿಳಿದಂತೆ
ಕೆಂಪು, ಹಸಿರು ಬಿಳಿ ಎಲೆಗಳ ಮಧ್ಯೆ
ಇಲ್ಲೊಂದು ಅಲ್ಲೊಂದು ಇಣುಕುವ ಹೂ

‘ಎಷ್ಟೆಲ್ಲ ಹೂವಿನ ಗಿಡಳಿದ್ದರೂ
ದೇವರ ಪೂಜೆಗೆಂದು ಒಂದು ಹೂವೂ ಸಿಗುವುದಿಲ್ಲ’
ಅಮ್ಮ ಬಂದಾಗಲೆಲ್ಲ ಮೂಗು ಮುರಿದರೆ
ಅಪ್ಪನಿಗೆ ಮಗಳು ಮಾಡಿದ್ದೆಲ್ಲವು ಸರಿ

‘ನೂರಿಪ್ಪತ್ತು ಕುಂಡ ಮಾಡಿದ್ದೇನೆ’
ನಾನು ಹೆಮ್ಮೆ ಪಡುವಾಗಲೆಲ್ಲ ಇವರದ್ದು
ಒಂದೇ ಒರಾತ- ‘ತೆಗೆದು ಬಿಡೋಣ
ಈ ಹೂ ಬಿಡದ ಬಣ್ಣದ ಗಿಡಗಳನ್ನೆಲ್ಲ,
ಹೂವೇ ಬಿಡದ ಇವುಗಳಿಗೆ
ಎಷ್ಟು ನೀರುಣಿಸಿದರೂ ಲಾಭವಿಲ್ಲ’
ನನಗೋ ಹೂವಿಲ್ಲದ ಕ್ರೋಟನ್ ಗಿಡಗಳೆಂದರೆ
ಅದೇನೋ ಹೇಳಿಕೊಳ್ಳಲಾಗದ ಮಮತೆ

ಹೂ ಗಿಡಗಳ ಕುರಿತು
ಮನೆಯವರೆಲ್ಲರ ಪ್ರೀತಿ ಹೆಚ್ಚಿದಂತೆ
ವಿರೋಧಿಸಲೂ ಆಗದೆ ಉಳಿಸಿಕೊಳ್ಳಲೂ ಆಗದೆ
ಒಳಗೊಳಗೇ ಚಡಪಡಿಸುತ್ತಿದ್ದೇನೆ

ಮೊನ್ನೆ ನನ್ನ ಮೂರು ವರ್ಷದ ಮಗ
ಆರು ವರ್ಷದ ತನ್ನಣ್ಣನೊಂದಿಗೆ ಸೇರಿಕೊಂಡು
ಗಿಡಗಳಿಗೆ ನೀರುಣಿಸುವ ಜವಾಬ್ಧಾರಿ ಹೊತ್ತಾಗ
ಎದೆಯ ಮೂಲೆಯಲ್ಲೊಂದು ಹೇಳಲಾಗದ ಸಮಾಧಾನ
‘ಇನ್ನು ಚಿಂತಿಸಬೇಕಿಲ್ಲ,
ಬದುಕಿಕೊಂಡಾವು ನನ್ನ ಗಿಡಗಳು’

319904_440652889358058_1967057154_n

ಚೆಕ್ ಮೀಟ್

ಜೀವನವೇ ಒಂದು ಚದುರಂಗ
ಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀ
ಕಪ್ಪು ಬಿಳುಪಿನ ಚೌಕದ ಸಾಲು ಸಾಲು
ಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿ
ಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತ
ಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ

ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲ
ದ್ವಂಸಗೈದ ಬಿಳಿಯ ಸೈನ್ಯವನ್ನು
ಬರೀ ಪದಾತಿದಳವೊಂದರಿಂದಲೇ
ಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆ
ಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆ
ಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ

ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ
ಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು
ಬದುಕಲೆಂದೇ ಇದೆ ಕ್ಯಾಸ್‌ಲಿಂಗ್
ರಾಜನೊಬ್ಬ ಬದುಕಿದರೆ ಸಾಕು
ಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ?

ಒಬ್ಬ ರಾಜನನ್ನುಳಿಸಲು
ಸೈನ್ಯದ ಪ್ರತಿಯೊಬ್ಬನೂ
ಜೀವದ ಹಂಗು ತೊರೆದು ಹೋರಾಡಬೇಕು
ಪದಾತಿದಳದ ಸೈನಿಕನೊಬ್ಬ ಒಂದೊಂದೇ
ಹೆಜ್ಜೆಯಿಟ್ಟು ಕೊನೆಯ ಹಂತ ತಲುಪಿ
ತ್ರಿವಿಕ್ರಮನಾಗಿಬಿಟ್ಟರೆ ತಕ್ಷಣವೇ
ಆತನನ್ನು ಬದಲಿಸಿ ರಾಣಿಯೊಬ್ಬಳನ್ನು ಪಟ್ಟಕ್ಕೇರಿಸಬೇಕು
ಇನ್ನೊಬ್ಬರ ಶ್ರಮದ ದುಡಿಮೆಯಲ್ಲಿ ರಾಜ ಮತ್ತಿಷ್ಟು ಕೊಬ್ಬಬೇಕು

ಎಷ್ಟೆಂದು ಆಡುತ್ತೀರಿ?
ದಿನವಿಡೀ ಒಂದೇ ಆಟ
ಛೇ… ಈಗಲಾದರೂ ಮುಗಿಸಿ ಬಿಡಿ
ಕಪ್ಪು ಸೈನ್ಯವನ್ನು ಸೋಲಿಸುವ ಮೋಸದಾಟ
ಮುಸುಗುಡುವ ಬಿಳಿಯ ರಾಜನಿಗೆ ಎದುರಾಗಿ
ಕಪ್ಪು ರಾಣಿಯನ್ನಿಟ್ಟು ಬಿಟ್ಟರೆ
ಅಲ್ಲಾಡಲಾಗದೇ ಜೀವನವೇ ಚೆಕ್‌ಮೀಟ್

10929208_1561223007456096_4035364600876412763_n

ನಾನು ಯುದ್ಧ ಮಾಡಬೇಕಿದೆ

ಯುದ್ಧ ಮಾಡಬೇಕಿದೆ ನಾನು-
ನನ್ನೊಳಗೆ ನಾನೊಂದು ಹೋರಾಟ
ನಡೆಸುವ ಕಾಲ ಸನ್ನಿಹಿತವಾಗಿದೆ

ಕೈಯ್ಯಲ್ಲಿನ ಆಯುಧವ ಕೆಳಗಿಡುವಂತೆ
ನನ್ನ ಮನಸ್ಸನ್ನು ನಾನೇ ಒಪ್ಪಿಸಲು
ನನ್ನೊಳಗೊಂದು ಜಗಳ ಕಾಯಬೇಕಿದೆ

ಸುತ್ತಲಿನ ಜನರನ್ನು ನನ್ನವರೆಂದು
ಕಾಣುವುದಕ್ಕೆ ಮನಸ್ಸನ್ನು ಹದಗೊಳಿಸಲು
ಎದೆಯೊಳಗೆ ಪ್ರೀತಿಯನ್ನು ಉತ್ತು ಬಿತ್ತಬೇಕಿದೆ

ಕೀಳು ಮೇಲು ಅನ್ನದೇ
ಜೀವ ಜಗದ ಸಮಾನತೆಗಾಗಿ
ನನ್ನನ್ನೇ ಅಣಿಗೊಳಿಸಲು ಯುದ್ಧ ಮಾಡಬೇಕಿದೆ

ಉಸಿರುಗಟ್ಟಿಯೂ ಬದುಕುವ
ಹೆಣ್ಣಿನ ಸ್ಥಿತಿಗೊಂದು ಅಂತ್ಯ ಹಾಡಿ ಜೀವಿಸುವ
ಹುಮ್ಮಸ್ಸನ್ನು ನೀಡಲು ಹೋರಾಟ ಮಾಡಬೇಕಿದೆ

ತಯಾರಾದ ಎಲ್ಲಾ ಬಂದೂಕುಗಳನ್ನು ಹಂಡೆ
ಒಲೆಗೆ ಹಾಕಿ ನೀರು ಬಿಸಿಯಾಗಿಸಿ, ತಲೆ ಸ್ನಾನ ಮಾಡಿ
ಮಂಚಕ್ಕೇರಲು ಮನಸ್ಸನ್ನು ಸಿದ್ದಗೊಳಿಸಬೇಕಿದೆ

ಕಾಣುವ ಶತ್ರುಗಳನ್ನು ತೋಳೇರಿಸಿ
ಯುದ್ಧಕ್ಕೆ ಆಹ್ವಾನಿಸುವ ಮನಸ್ಸನ್ನು
ಗುದಮುರಿಗೆ ಕಟ್ಟಲು ಸನ್ನದ್ಧವಾಗಬೇಕಿದೆ

ಕಾಣದ ಶತ್ರುವನ್ನು ದಿಟ್ಟವಾಗಿ ಎದುರಿಸಲು
ನಳಿಕೆಗಳನು ಹದೆಯೇರಿಸದೇ ಜಯಗಳಿಸಲು
ಪ್ರೀತಿಯ ಮೊಟ್ಟೆಗೆ ಕಾವು ನೀಡಿ ಹಾರಿ ಬಿಡಬೇಕಿದೆ ……..

976352_487147021375311_2107641030_o

ಗೆಜ್ಜೆ ಕಟ್ಟದ ಕಾಲಲ್ಲಿ

ಕತ್ತಲು ತುಂಬಿದ ತಡಿಕೆ ಬಾಗಿಲ ಸರಿಸಿ
ಹೊಗೆ ಹೀರಿ ಉಸಿರಾಟಕೂ ತೇಕುವುದ ನಿಲಿಸಿ
ಹೊರಗಿಣುಕಿ ಹಕ್ಕಿಯಾಗಿ ಹಾರಿದ್ದೇವೆ ಜಗದಗಲಕ್ಕೆ

ಮಾತು ಮಾತಿಗೂ ಹೆಣ್ಣೆಂಬ ಚುಚ್ಚು ನುಡಿಯನು ಮೀರಿ
ಎಲ್ಲ ಕಷ್ಟಗಳಿಗೂ ನಾವೇ ಹೊಣೆಯೆಂಬ ಪಾಪಪ್ರಜ್ಙೆಯ ಮೆಟ್ಟಿ
ಬೆಳಕ ತುಂಬಿಕೊಂಡಿದ್ದೇವೆ ಕಣ್ಣೊಳಗಿನ ಕಪ್ಪು ಗೋಲಿಯೊಳಗೆ

ತಳುಕು ಬಳುಕಿನ ವೈಯ್ಯಾರಗಳೆ ನಮಗೆ ಭೂಷಣ ಎಂಬುದ ಧಿಕ್ಕರಿಸಿ
ನಡೆ ನುಡಿಗಳಲ್ಲೆಲ್ಲ ನಯ ನಾಜೂಕನ್ನು ಒತ್ತಾಯದಿಂದ ತುರುಕುವುದ ವಿರೋಧಿಸಿ
ಬೀಡು ಬೀಸಾಗಿ ಹೊರಟಿದ್ದೇವೆ ನಮ್ಮದೇ ಹೊಸದೊಂದು ದಾರಿಯ ತಿರುವಿಗೆ

ಕೈ ಕುತ್ತಿಗೆಯ ತುಂಬಿದ ಝಗಮಗಿಸುವ ಆಭರಣವ ಕಳಚಿಟ್ಟು
ಹಣೆಯ ತುಂಬಾ ಮೆರೆವ ಅಸ್ತಂಗತ ಸೂರ್‍ಯನಿಗೆ ಹೊಸ ರೂಪ ಕೊಟ್ಟು
ಹೊರಟಿದ್ದೇವೆ ಮುಖ ತಿರುಗಿಸಿ ನಮ್ಮದೇ ಆದ ಹೊಸ ನಕ್ಷತ್ರದೆಡೆಗೆ

ಒಂಟಿ ನೊಗವಾಗಿ ರಥವ ಎಳೆದ ನೋವನ್ನೆಲ್ಲ ಮರೆತು
ನಮ್ಮ ಬದುಕಿಗೆ ನಮ್ಮದೇ ಆಯ್ಕೆಯ ಸೂತ್ರ ಹಿಡಿದು
ಕಾಲಿಗೆ ಗೆಜ್ಜೆ ಕಟ್ಟದೆಯೂ ಝೇಂಕರಿಸಿದ್ದೇವೆ ನಮ್ಮದೇ ಹಾಡಿನ ದನಿಗೆ

ಜಗದ ಅವಮಾನ ಹೇರಿದ ಭಾರವನ್ನೆಲ್ಲ ಕಿತ್ತೆಸೆದು
ಹೊರಟಿದ್ದೇವೆ ನಾವು ಸೂಡಿ ಬೆಳಕಿಗಿಷ್ಟು ಎಣ್ಣೆಯ ಸುರಿದು
ನಾಳೆ ಉದಯಿಸುವ ಸೂರ್ಯ ನಮ್ಮಲ್ಲೂ ಬೆಳಕ ತುಂಬುವ ಬಯಕೆಗೆ

10533815_1561227747455622_1857372529698795002_n

’ಕಾವ್ಯ ಸಮಷ್ಟಿ’ ಯಲ್ಲಿ ಈ ಬಾರಿ ಸಚಿನ್ ಅಂಕೋಲಾ ಬರೆದ ಐದು ಹೊಸ ಕವಿತೆಗಳು.. ಸಚಿನ್ ಒಬ್ಬ ಭರವಸೆಯ ಯುವಕವಿ. ’ನಾನೂ ಹೆಣ್ಣಾಗಬೇಕಿತ್ತು’ ಎಂಬ ಮೊದಲ ಕವನ ಸಂಕಲನದಿಂದ ಓದುಗರ ಮೆಚ್ಚಿಗೆಗೆ ಪಾತ್ರನಾದವನು..

– ಸಚಿನ್ ಅಂಕೋಲಾ…

1925193_656315634477955_2230670108962792486_n

ಬದುಕು ಕೆತ್ತಿದವರು…

ಮಶೀನಿನ ಕಟಕಟ
ಸದ್ದಿನಲಿ
ಬಣ್ಣ ಬಣ್ಣದ ಕನಸುಗಳ
ಹೊಲೆಯುತ್ತಿದ್ದ
ಅಪ್ಪನೆಂದರೆ ಸದಾ ವಿಸ್ಮಯ..!
ಕರಕರನೆ ಕತ್ತರಿಸಿದ
ತುಂಡು ತುಂಡುಗಳೆಲ್ಲಾ
ಒಂದಾಗಿ ಆಗುತ್ತಿದ್ದ ಸೋಜಿಗ..!
ನಾನು ನಿದ್ದೆಗೆ ಜಾರುತ್ತಿದ್ದದ್ದೆಲ್ಲಾ
ಆ ಸದ್ದಿನ ಲಾಲಿ ಕೇಳುತ್ತಲೇ..,
ಮುಂಜಾನೆ ಎದ್ದಾಗಲೂ
ಅದೇ ಸುಪ್ರಭಾತ…
ಹಗಲು ರಾತ್ರಿಗಳ ನಡುವೆ
ಮಶೀನಿನ ಚಕ್ರ ತಿರುವುತ್ತಿದ್ದ
ಅಪ್ಪನ ಕಾಲುಗಳಲ್ಲಿ
ಸೋಲದ ಹಠ…!
ಅಮ್ಮನೇನು ಹಿಂದೆ ಬಿದ್ದವಳಲ್ಲಾ,
ನೇಗಿಲಿಗೆ ಕಟ್ಟಿದ
ಜೋಡೆತ್ತಿನಂತವಳು..!
ಅಪ್ಪ ಹೊಲೆದ ಆಕ್ರತಿಗಳಿಗೆಲ್ಲಾ
ಅಂದ ಚೆಂದದ ಗುಂಡಿಗಳ ಹಚ್ಚಿ,
ಇಸ್ತ್ರಿಯ ಬೆಚ್ಚಗೆ ಮಾಡಲು
ಕೆಂಡಗಳ ನಡುವೆ
ಇದ್ದಿಲಿಗೆ ಗಾಳಿ ಊದುತ್ತಾ…,
ಹಿತ್ತಲ ಅಬ್ಬಲಿ- ಮುತ್ತುಮಲ್ಲಿಗೆ
ಕೊಯ್ಯುತ್ತಾ
ಚೆಂದದ ಮಾಲೆ ಮಾಡಿ
ತಾನೆಂದೂ ಮುಡಿಯದೇ
ಪುಡಿಗಾಸಿಗೆ ಮಾರಿ
ಅಪ್ಪನ ಹೆಗಲಿಗೆ
ಆಧಾರವಾದವಳು…..!
ಅದೆಷ್ಟು ವರುಷಗಳು ಉರುಳಿದವು…,
ಏನೊಂದೂ ಬದಲಾಗದೇ,
ಅಪ್ಪ ಅದೇ ಮಶೀನಿನ ಮೇಲೆ
ಬದುಕು ಕೆತ್ತುವ ಕಾಯಕದಲ್ಲಿ…,
ಅಮ್ಮ ಪಟ ಪಟನೆ ಹಚ್ಚಿಟ್ಟು
ಗುಂಡಿಗಳೆಲ್ಲವ,
ಹಸಿ ಮೀನು ಕೊಯ್ದು
ಪಳದಿ ಮಾಡುವ
ದಾವಂತದಲ್ಲಿ……
—————————————–

13654146_907963512646498_2100950679136621194_n

ಪ್ರವೀಣ..

ನಿಮಗೆಲ್ಲಾ ಹೇಳಬೇಕೆನಿಸುತ್ತಿದೆ
ನನ್ನೂರ ಪ್ರವೀಣನ ಕಥೆಯ… ಬಡತನವನ್ನೇ
ಹಾಸು ಹೊದ್ದಂತಿದ್ದ ಮನೆಯಲ್ಲಿ
ಭರವಸೆಯ ದೀಪದಂತಿದ್ದ ಹುಡುಗ..,
ಹೊಟ್ಟೆಯಪಾಡಿಗೆ
ಓಡಿಸುತ್ತಿದ್ದ ರಿಕ್ಷಾ ಒಂದನ್ನು…
ಅಂದು ಪೋನ್ ಕರೆಯೊಂದು ಬಂತು
ಅರ್ಧಕ್ಕೆ ಬಿಟ್ಟು ಊಟ,ಎದ್ದು ಹೊರಟ..,
ಅಮ್ಮ ಕೂಗಿಕೊಳ್ಳುತ್ತಿದ್ದರೂ
‘ಊಟ ಮಾಡಿ ಹೋಗೋ…’ ಎಂದು..,
‘ಬರುತ್ತೇನೆ ಬೇಗ; ತುರ್ತು ಬಾಡಿಗೆಯಿದೆ…’ ಎಂದವ
ದೂರದಲಿ ಮರೆಯಾದ…
* * *
“ಗೆಳೆಯ, ಒಂದು ಒಳ್ಳೆ ತಳಿಯ
ಹಸು ಕೊಂಡಿದ್ದೇನೆ..,
ಇಲ್ಲೇ ಪಕ್ಕದ ಊರಲ್ಲೇ….,
ಮನೆಗೆ ಸಾಗಿಸಬೇಕಿದೆ ಬರುತ್ತೀಯಾ..??
ಯಾರೂ ಒಪ್ಪುತ್ತಿಲ್ಲ ಮಾರಾಯ
ದನ ಸಾಗಿಸಲು…,
ನೀನೇ ಬಾ; ಹಣ ತುಸು ಹೆಚ್ಚೇ ಕೊಡುವೆ….”
ಗೆಳೆಯನ ಪೋನ್ ಕರೆಗೆ
ಎದ್ದು ಹೊರಟ್ಟಿದ್ದ ಪ್ರವೀಣ….
* * *
ಅಂತೂ ಹಸುವನ್ನು ಗಾಡಿಗೇರಿಸಿ
ಮರಳಿ ಹೊರಟದ್ದಾಯಿತು ಗೆಳೆಯರಿಬ್ಬರೂ..,
ಅರ್ಧದಾರಿ ತಲುಪಿರಬಹುದೇನೋ
ರಕ್ಕಸರ ಗುಂಪೊಂದು ಎದುರಾಯಿತು..,
ಹಿಡಿದು ಕೈಯಲ್ಲಿ ಮಚ್ಚು ತಲವಾರು…
ಮುಂದೆ ನಡೆದದ್ದೆಲ್ಲಾ
ಧರ್ಮದ ಅಮಲಲಿ ಹರಿದ
ರಕ್ತದ ಹಸಿ ಹಸಿ ಕ್ಷಣಗಳು….
* * *
ಸಣ್ಣಗೆ ಮಳೆ ಜಿನುಗಿತು,
ಹನಿ ನೀರಿಗಾಗಿ ಅಂಗಲಾಚುತ್ತಿದ್ದವನ
ಆರ್ತನಾದಕ್ಕೆ ಕರಗಿದ ಮುಗಿಲಿನಿಂದ….
ಪ್ರವೀಣ ನಡುಬೀದಿಯಲಿ ಲೀನನಾದ…
ಅಥವಾ ಪ್ರವೀಣ ನಡುಬೀದಿಯಲಿ
ಬಲಿಯಾದ…..
* * *
ನೆತ್ತರು ಬಳಿದ ಕೈಗಳು
ಬಾಡೂಟ ಉಂಡು ಮನೆ ಸೇರಿಕೊಂಡವು…,
ಇತ್ತ ಬೇಗ ಬರುತ್ತೇನೆ ಎಂದವನಿಗಾಗಿ
ಕಾದಿದ್ದಾಳೆ ತಾಯಿ ತಾನಿನ್ನೂ ಊಟಮಾಡದೇ…!
ಏನೆಲ್ಲಾ ತನ್ನೆದುರೇ ನಡೆದು ಹೋದರೂ
ಏನೊಂದೂ ತಿಳಿಯದ ಹಸು
ಕಟ್ಟು ಬಿಚ್ಚಿಕೊಳ್ಳಲು ಹವಣಿಸುತ್ತಲೇ ಇದೆ…..!!!
—————————————–

14446186_951691268273722_1611578033280044432_n

ಮಾಸಿದ ಕನ್ನಡಿ

ದಿಟ್ಟಿಸುತ್ತಾಳೆ ಆಕೆ ತನ್ನನ್ನೇ,
ಮಾಸಿದ ಕನ್ನಡಿಯಲ್ಲೂ
ಮಿನುಗುತ್ತದೆ ಅವಳಂದ..!
ತುಟಿಯ ಕೆಂಬಣ್ಣ,
ಅಲ್ಲೇ ತುಸು ಅಂತರದಲ್ಲಿ
ದುಂಡನೆಯ ದೃಷ್ಠಿ ಬೊಟ್ಟು,
ಕಣ್ಣ ಇಕ್ಕೆಲಗಳಲ್ಲಿ ಕಪ್ಪು ಕಾಡಿಗೆ,
ಮುದ್ದಾದ ಮೂಗಿಗೆ
ಅಂಟಿಕೊಂಡ ಸುರಳಿ ಮೂಗುತಿ,
ಕಿವಿಯ ಲೋಲಾಕು,
ಮುಡಿಯ ಮಲ್ಲಿಗೆ,
ತನ್ನಂದಕ್ಕೆ ತಾನೇ ನಾಚುತ್ತಾಳೆ..!!
ಕೋಣೆಯ ಸುತ್ತಲೂ
ದೃಷ್ಠಿ ಹಾಯಿಸಿ
ತುಂಬಿಕೊಂಡಿದ್ದ
ಅತ್ತರಿನ ಘಮಕ್ಕೆ
ಪುಳಕಗೊಳ್ಳುತ್ತಾಳೆ…!
ದೂರದಲಿ ಕಡಲೊಳು
ಲೀನವಾಗುತಿಹ
ಹೊಂಬಣ್ಣದ ಸೂರ್ಯ,
ಈ ಇಳಿಸಂಜೆಗೆ ರಂಗಾದ
ಅವಳೂ ಮುಳುಗುತ್ತಾಳೆ
ಕತ್ತಲೆಯಲಿ…,
ಮತ್ತವಳ ನಿಟ್ಟುಸಿರೂ
ಬೀಸುವ ಗಾಳಿಯಲಿ…!!
ಆ ರಾತ್ರಿ ಕಳೆದು
ಮತ್ತೆ ಬೆಳಕಾದಾಗ
ಎಲ್ಲಾ ಅಲ್ಲೋಲ ಕಲ್ಲೋಲ;
ತೊಡೆಯ ಸಂದಿಯಲಿ
ಕೊರೆವ ಬೇನೆ..,
ಕಮಟು ವೀರ್ಯದ ದುರ್ನಾತ..,
ಹರಿದೆಸೆದ ನಿರೋಧದ ಗುರುತು..,
ಬೆತ್ತಲ ದೇಹ ತಡಕಾಡುವಾಗ
ತುಂಡು ಬಟ್ಟೆಗಾಗಿ
ಮುಗಿಲು ಮುಟ್ಟುವಂತೆ
ಕೂಗಬೇಕೆನಿಸುತ್ತದವಳಿಗೆ…!
“ನನ್ನರ್ಧ ಬದುಕು
ಇದೇ ಮಂಚದಲ್ಲಿ
ಬೆತ್ತಲಾಗೇ ಕಳೆದೆ
ಸವೆದು ಹೋದೆ…!
ಹಂಚಬೇಕಿದೆ ನಿಮಗೆಲ್ಲಾ
ಮೈಯ್ಯ ತಿಂದು ತೇಗಿದವರಿಗೆಲ್ಲಾ,
ನರನಾಡಿಯೊಳಗಿನ ಬೇಗೆಯ…
ಸುಟ್ಟ ಕನಸುಗಳ ಬೂದಿಯ….
ಹೌದು ನಾನು ವೇಷ್ಯೆ…
ನನ್ನನ್ನು ವೇಷ್ಯೆಮಾಡಿದ
ನಿಮಗೆಲ್ಲಾ ಹಿಡಿಶಾಪವಿದೆ..
ನನ್ನ ದಿಕ್ಕಾರವಿದೆ… ”


13769377_905776872865162_8073958579008943904_n

ಬರಬೇಕು ಸುಗ್ಗಿ…

ಬರಬೇಕು ಸುಗ್ಗಿ
ಅನುಕ್ಷಣವೂ- ಅನುದಿನವೂ
ತಟ್ಟಿ ಗುಡಿಸಲುಗಳಲ್ಲಿ..,
ಒಪ್ಪತ್ತು ಉಣ್ಣುವ ಗಂಜಿಯಲ್ಲಿ…
ಬಣ್ಣ ಬಣ್ಣದ ಕನಸುಗಳ
ತುರಾಯಿ ಹೊತ್ತು
ಗುಮಟೆ ಪಾಂಗಿನ ಸದ್ದಿಗೆ
ಹೆಜ್ಜೆ ಹಾಕುವ ಸಂಭ್ರಮ
ಇರಬೇಕು ವರುಷ ಪೂರ್ತಿ…
ನಿಲ್ಲಲಿ ಒಳಗೊಳಗಿನ ಯುದ್ಧ,
ಜಾತಿ ಮತಗಳ ನಡುವೆ
ಮೇಲು ಕೀಳೆಂಬ ಗೊಡವೆ,
ಕೊನೆಗಾಣಲಿ
ಹಸಿವಿಗೂ ಕಾಸಿಗೂ ಹೊಡೆದಾಟ…
ಸುಟ್ಟು ಬಿಡುವ
ನಮ್ಮೊಳಗಿನ ಕಾಮನನ್ನು
ಬರಬೇಕು ಸುಗ್ಗಿ…
ಹೊರಡಲಿ ಮೆರವಣಿಗೆ
ಕರಿದೇವನು,
ಊರ ಬೀದಿಯ ತುಂಬೆಲ್ಲಾ
ಕೊಳೆ ರಾಶಿಯಾಗಿದೆ…;
ಎಲ್ಲವ ಹೊತ್ತೊಯ್ಯಲಿ,
ಕಡಲ ಒಡಲಲ್ಲಿ ಲೀನವಾಗಲಿ
ದುಷ್ಟತನವೆಲ್ಲಾ….
ಬರಬೇಕು ಸುಗ್ಗಿ
ಜಗದ ಜನರೆಲ್ಲಾ
ಕೈ- ಕೈ ಹಿಡಿದು
ಕುಣಿಬೇಕು ಹಿಗ್ಗಿ…….
————————————

13533276_894385847337598_1595443545120926701_n

ನನ್ನವಳು……

ಸುಡುಸುಡುವ ಬಿಸಿಲಲ್ಲೂ
ಮಳೆಹಾಡ ಹಾಡುತ್ತಾಳೆ,
ಹುಸಿ ಮುನಿಸ ತೋರುತ್ತಾ
ಹಸಿ ಕನಸ ಬಿತ್ತುತ್ತಾಳೆ,
ಒಲವ ಮುಧುಪಾನ ಕುಡಿಸಿ
ಮತ್ತಾಗುತ್ತಾಳೆ,
ಮುತ್ತಾಗುತ್ತಾಳೆ…..

ವಸಂತದ ಚಿಗುರಾಗುತ್ತಾಳೆ,
ಗುಲ್ ಮೆಹರ್ ನಂತೆ ಮೈದುಂಬಿ ಅರಳುತ್ತಾಳೆ,
ಕಣ್ಣಲ್ಲೇ ಮಾತಾಗುತ್ತಾಳೆ,
ಮಾತಲ್ಲಿ ಮಮಕಾರವಾಗುತ್ತಾಳೆ,
ನದಿಯಾಗುತ್ತಾಳೆ, ಎದೆಯಲ್ಲಿ ಪ್ರೇಮದ ಒರತೆಯಾಗುತ್ತಾಳೆ..

ಒಮ್ಮೊಮ್ಮೆ ಅಮ್ಮನಾಗುತ್ತಾಳೆ
ಒಡಳೊಳಗೆ ಕಡಲ ತುಂಬಿಕೊಡುತ್ತಾಳೆ
ಗುರುವಾಗುತ್ತಾಳೆ, ಗುರಿಯಾಗುತ್ತಾಳೆ,
ಬೆಳಕು
ಬೆಳದಿಂಗಳಾಗುತ್ತಾಳೆ
ಏನೆಲ್ಲಾ ಬರೆದರೂ
ಕೊನೆಯಲ್ಲಿ ಒಂದಿಷ್ಟು
ಉಳಿದುಬಿಡುತ್ತಾಳೆ…!!

13423736_882857095157140_6697335747660538650_n

 

’ಕಾವ್ಯ ಸಮಷ್ಟಿ’ಯಲ್ಲಿ ಈ ಸರ್ತಿ ಲೇಖಕಿ, ಪ್ರವಾಸಕಿ, ಚಂದನ ಟಿವಿ ಕಾರ್ಯಕ್ರಮ ನಿರ್ವಾಹಕಿ, ಜೊತೆಯಲ್ಲಿ ಒಳ್ಳೆಯ ಕವಿಯೂ ಆಗಿರುವ ಬಹುಮುಖ ಪ್ರತಿಭೆಯ ಆರತಿ ಎಚ್,ಎನ್ ರಚಿಸಿದ ಐದು ಕವನಗಳು.

15965919_10212205874250025_869256109609736453_n

ಬಿರಿದ ಸಂಪಿಗೆಯೆಸಳು

ಹೊರಟುಬಿಟ್ಟೆ ಏಕೆ
ಇಷ್ಟು ಬೇಗ?
ಎಷ್ಟು ಮಾತು ಬಾಕಿಯಿತ್ತು
ನನ್ನೊಳಗೆ,
ರಾತ್ರಿ ಇನ್ನೂ ಉಳಿದಿದೆ
ಕಣ್ಣೊಳಗೆ…

ನೆನಪ ಬಿಸಿ ಆರಿಲ್ಲ
ಮೈಯಲ್ಲಿ.
ಕಾತುರತೆ ಹಬ್ಬಿ ಕುಳಿತಿದೆ
ತುಟಿಯಲ್ಲಿ.
ಸುತ್ತೆಲ್ಲಾ ಹರಡುತ್ತಿದೆ
ಹೂ ಅರಳಿ ದೇಹಗಂಧ
ಗಾಳಿಯಲೆಯಲ್ಲೇ ತೂಗುತ್ತಿದೆ
ಬಿಸಿ ಉಸಿರಾಗಿ ಬೆಳಕು ಮಂದ…

ಖಾಲಿತನದೊಂದಿಗೆ ರಾಜಿ
ಸಾಧ್ಯವೇ?
ಮಾತು ಕಿತ್ತುಕೊಂಡಂತಿದೆ
ನೀನು ಮುತ್ತ ನೀಡಿ.
ತೊಟ್ಟ ಕೈಬಳೆಯೂ ಇಂದು
ಶಬ್ದ ಮಾಡದು ನೋಡು
ಸುರುಳಿ ಸುತ್ತಿದೆ ಹಾಡು
ನುಡಿಯದೇ
ಸಿಡಿಯಲಾಗದ ಪಾಡು…

ಕವಿದ ಬೇಸರದಲ್ಲಿ
ಹಠ ಮಾಡಬಹುದೆ ಹೀಗೆ?
ಹರಡಿ ಚೆಲ್ಲಿದ ಹಾಗೆ
ಬಿರಿದ ಸಂಪಿಗೆಯೆಸಳು.
ಮುಸ್ಸಂಜೆಯೂ ನೋಡೀಗ
ಕೆಂಪಾಗಿ ಇಳಿಯುವುದು
ಮುಳುಗಿ ತೇಲಿದಂತಿದೆ
ಕಣ್ಣಲ್ಲಿ ನೆರಳು…

ಜಾರಿ ಹೋಗುತ್ತದೆ ಸಮಯ,
ಭಾರವಾಗಿದೆ ಕೊರಳು
ರೆಕ್ಕೆಯಿಲ್ಲದ ಆಕಾಶದಂಚಲ್ಲಿ
ಕಲಕಿದಂತಿದೆ ಮೋಡ
ಒಡಲು ಮಿಂಚ ಅಮಲು…
ಇನ್ನು ಇಲ್ಲಿ ನನ್ನದೇನೂ ಇಲ್ಲ,
ಸಾಲುಸಾಲಿಗೂ ಬರುವ ಹಾಡ ಕಾವು.
ಅರಳುತ್ತದೆ, ಯಾರು ನೋಡದಿದ್ದರೂ
ಬಾನು ಮುಟ್ಟುವ ಬೆಟ್ಟದಡಿಯಲ್ಲಿ
ಹೀಗೆ ಕೆಂಪು ಹೂವು…

11891422_1646117765633286_4525062594966598946_o

ಹೊರಡಬೇಕಿದೆ ಎಲ್ಲ ಬಿಟ್ಟು

ಹೊರಡಬೇಕಿದೆ ಎಲ್ಲ ಬಿಟ್ಟು ಜರೂರಾಗಿ,
ಭೂಪಟ ತೆರೆದರೆ, ಬರೀ ಗಡಿರೇಖೆ
ಸರಹದ್ದು, ಮುಳ್ಳುಬೇಲಿಗಳೇ.
ಹೊರಟ ಜಾಗಕ್ಕೂ ಇಲ್ಲಿಗೂ ಹೆಚ್ಚೇನೂ
ವ್ಯತ್ಯಾಸವಿಲ್ಲ…ನಿಯಮ ಇರುವುದು
ಕೇವಲ ಮುರಿಯುವುದಕ್ಕಲ್ಲ
ಪಾಲಿಸಲು ಪರಮಾತ್ಮನಾಗಬೇಕಿಲ್ಲ,
ಪತಿವ್ರತೆಯಾದರೆ ಸಾಕು!

ಹೊತ್ತು ತಂದ ಪೆಟ್ಟಿಗೆಯಲ್ಲಿರುವುದೇನೂ
ಕಡಿಮೆಯಲ್ಲ, ಕಠೋರಭಾರ.
ಹಸಿರುಬಳೆ ತುಂಡಾಗದೇ
ಚೂರುಚೂರಾಗಿ ಒಡೆದ ಸದ್ದು,
ಗದರುವ ದನಿಗೆ ಸತ್ತಮಾತು,
ಒದ್ದೆ ನಗುವ ಸದೆ ಬಡಿದ ಸಂತಾಪಸಂಭ್ರಮ,
ಹಾಕದ ಬರೆಗೆ ತಂನಿಂತಾನೇ ಸುಟ್ಟಕನಸು,
ಅವರಿಚ್ಛೆಯ ತಾಳಕ್ಕೆ ಕುಣಿದ
ತಕಥೈ ದಿಧಿತ್ತಾಂ – ಅಳುವ ಗೆಜ್ಜೆ…

ಕಟ್ಟಿಕೊಂಡಷ್ಟು ಸುಲಭವಲ್ಲ
ಬಿಟ್ಟುಬಿಡುವುದು.
ನಾರಿ ಕರೆದಾಕ್ಷಣ ಬಂದು
ಒದಗುವುದಕ್ಕೆ ನರಹರಿಯು
ನಾಚಿಕೆಯ ಮೂರ್ತಿ.
ಕಣ್ಣ ಕಾಡಿಗೆ ದೃಷ್ಟಿಬೊಟ್ಟು ಇಟ್ಟು
ಬಗ್ಗಿದರಾಯ್ತು, ಹರಸಿ ಹಾರೈಸುತ್ತಾರೆ,
ಮುತೈದೆತನ ಸಾವಿರ ವರುಷಕೂ ಸಲೀಸು…

ಹೊರಡಬೇಕಿದೆ ಎಲ್ಲ ಬಿಟ್ಟು,
ಕರೆಯುತ್ತಾರೆಂದು ಕೈ ಹಿಡಿಯಲಾಗದು.
ಕಣ್ಣನೋಟ ಹೆಣಭಾರವಾದರೆ,
ನಮ್ಮ ದೇಹವ ನಾವೇ ಹೊರಬೇಕು
ಹೊರೆಯಾಗದಂತೆ.
ಸುಮ್ಮನೇ ಹುಚ್ಚು ಬಳ್ಳಿ ಬಳುಕುವುದು
ಗಾಳಿಯಾಟದಂತೆ
ಹೂ ಬಿಟ್ಟರೆ ತಾನೆ,
ಗಂಧ-ಘಮಲಿನ ಚಿಂತೆ?!

ತಿಟ್ಟು ಹತ್ತಿದ ಮೇಲೆ, ತಿರುಗಿ ನೋಡಬಾರದು
ಹೆಣ್ಣು, ಹಳೆಯ ನೆನಪುಗಳ
ಹಸಿರು ಸೀರೆಯುಟ್ಟು.
ಬಿಟ್ಟು ಹೊರಡುವುದೂ
ಕೊಟ್ಟು ಸೋಲುವ ಹಾಗೆ,
ಹೋದವರಾರೂ ತಿರುಗಿ ಬರುವುದಿಲ್ಲ.
ಹೊರಡುತ್ತೇನೆ ಈ ಕ್ಷಣ, ಎಲ್ಲ ಬಿಟ್ಟು
ಎನ್ನುವವರು
ಯಾರೂ, ಯಾವತ್ತೂ, ಯಾರಿಗೂ
ಹೇಳಿ ಹೋಗುವುದಿಲ್ಲ!

15350583_10211855066280045_117829814998166815_n

ಕವಿತೆಗಳಲ್ಲೇ ಅವಳು ಹೆಚ್ಚು ಸುಖವಾಗಿದ್ದಳು

ಹೀಗೆಂದು ಬಿಡುತ್ತೀರಿ ನೀವು.
ಹೀಗೆ ಹೇಳುವ ಮುನ್ನ
ಕವಿತೆ ಹುಟ್ಟುವ ಘಳಿಗೆಯನ್ನು
ಒಮ್ಮೆಯಾದರೂ ನೀವು ಧರಿಸಿ
ನೋಡಬೇಕಿತ್ತು!
ಸಿಗಿದು ಬಗಿದು ಚರಿತ್ರೆ ಕೆದಕುವವರಿಗೆ ನನ್ನ
ಬೊಗಸೆಯಲ್ಲಿರುವುದು
ಚಿಟ್ಟೆಯೋ, ದುಂಬಿಯೋ, ಮಿಂಚುಹುಳವೋ,
ಅನುಕ್ಷಣ ಅನುರಾಗದ ಪಟಫಟಿಸುವ ಹಂಬಲವೋ?
ಭೀಕರ ಮೌನದಲ್ಲಿ ಹೈರಾಣಾದವಳು
ಗೊತ್ತಿಲ್ಲದ ಉತ್ತರಕ್ಕೆ ನಿಮ್ಮನ್ನು
ಕೇಳುತ್ತಾಳೆಂಬ ಭ್ರಮೆಯಲ್ಲಿ ಕಾಯಬೇಡಿ!
ಉರಿಯುವ ಸಿಗರೇಟು ಕಣ್ಣು,
ಉಸಿರ ವರ್ತುಲದಲ್ಲಿ ಕಾದು
ನೀರಗುಳ್ಳೆಯಂತೆ ಮಾಯವಾಗಿ
ತಟಸ್ಥ ರಾಗದಂತಿರುವ ಶರಾಬು,
ಜೊತೆಯಿರಲಿ ಅನುದಿನ.
ಸಿಗದಾಗ, ಬಳ್ಳಿ ಹಬ್ಬಲು
ನೆಲವನ್ನೂ ಬಿಡುವುದಿಲ್ಲ, ಗೊತ್ತಿರಲಿ.
ಕೈಯಳತೆಗೂ ಸಿಗದ ಹಾಗೆ
ದೂರ ಕೂತು ಮಾತಾಡಿ
ತುಟಿ ತಣಿಯಲಿಲ್ಲವೆಂದರೆ,
ಎದೆ, ಸೊಂಟ, ತೊಡೆ ಜಘನಗಳ
ಸುದ್ದಿಗೂ ಬರಬೇಡಿ, ನನ್ನಾಣೆ!
ಹೀಗೆ ಅರೆಹುಚ್ಚಳಂತೆ ಏನೇನೋ
ಹಲಬುತ್ತಾ ನೆಚ್ಚಿ ಬಂದಾಗ,
ಭಂಗುರ ಕ್ಷಣದಂತೆ, ಬೂದಿ ಕೊಡವಿ, ನನ್ನೊಳಗಿನೊಳಗಿಂದ ಹಾಗೇ ಎದ್ದು ನಡೆದು ಹೋಗಿರುತ್ತೀರಿ, ನಿಜವಾಗಿ…

 

13445491_10210050240440527_3695302974359946726_n

ಕುಡಿದು ಬಿದ್ದಿದೆ ರಾತ್ರಿ

ತೂಗುರಾಗದ ನಿಶೆಯ
ಗುರುತುಗಳಿವು
ಕಾದ ಕೆಂಡದ ಬಳ್ಳಿಯಾಗಿ,
ನೋಟನಾಲಿಗೆ
ಬಾಗಿ ಬಳುಕಿದರೆ
ಬದುಕುಳಿಯಲಾಗದು ಹೀಗೆ!
ಹೀಗೆ
ಉಸಿರ ಬಾವುಟ ಹಿಡಿದು
ಪ್ರಪಂಚ ಗಿರಕಿ ಹೊಡೆದು
ಕಣ್ಣು ಕುಡಿದ ಬಟ್ಟಲು
ಊರ ಉಸಾಬರಿಗೆ ಬೆದರಿ
ಊರಲಾಗದ ಉಂಗುಷ್ಟ,
ಮುತ್ತ ಮೊಹರು
ಕಷ್ಟವಿದು, ನಿಭಾಯಿಸಲಾಗದು
ತಧಿಗಿಣತೋಂ ಎದೆಬಡಿತಕ್ಕೆ
ಬೆಂಬಲ ಬೆಲೆ ಸಿಗದ ಬಜಾರು ದುನಿಯಾ…ಬೇಜಾರು ಹಕ್ಕಿಗಳ
ಕೂಗು ಹೊತ್ತ ಗಾಳಿ ಮತ್ತ ಮೊರೆತಕ್ಕೆ
ತೆಕ್ಕೆಹನಿ ಹೊತ್ತ ಭಾರವೋ, ಹಗುರವೋ?
ಹೇಳುವುದು ಹೇಗೆ?
ಹೇಳಲಾಗದೆ ಗಂಟಲ ಸೆರೆಯಲ್ಲಿ ಹುದುಗಿ, ಬೇರಾಗುವ ದುಃಖದಲ್ಲಿ
ಅಲ್ಲಿ ನೀನು, ಇಲ್ಲಿ ನಾನು
ಕಾಯುತ್ತೇವೆ, ನಶೆ ಹೊತ್ತು
ತೂರಾಡುತ್ತಾ, ಕುಡಿದು ಬೀಳುವ
ಆ ಪಡಪೋಶಿ ರಾತ್ರಿಗೆ…

12748053_1700054450239617_3532179504298475051_o

ನಿದ್ದೆಗೆಟ್ಟ ಹೂ!

ರಾತ್ರಿಯಿಡೀ
ತಯಾರಾಗುತ್ತದೆ ಹೂ,
ಅಲಂಕರಿಸಿಕೊಂಡು ಅರಳಲು!
ಆಘ್ರಾಣಿಸಿದ
ಪ್ರತಿ ಉಸಿರೂ
ಸುಂಟರಗಾಳಿಯಲ್ಲಿ ಲಾಗ ಹೊಡೆದು,
ಸುರುಳಿ ಸುತ್ತಿ
ಚಿತ್ರಪಟವಾಗಿ ನೋಟ!
ನಾಕ ಭೋರಿಡುತ್ತಿರುವಾಗ
ಅದು ಮೆಲ್ಲುಸಿರೋ,
ಅರಳುವ ಸದ್ದೋ,
ತಿಳಿಯದೊಂದು ಲೋಕ.
ನಿನ್ನ ಬಣ್ಣ ತಾಕಿದ್ದೇ ತಡ,
ರಂಗಿನ ಹಂಗಿಲ್ಲದವಳ ಆವರಿಸಿ
ತುಟಿ ಹವಳ!
ಕಳವಳದ ದಳಕ್ಕೊಂದೇ ಧ್ಯಾನ
ಹೊಕ್ಕುಳ ನಡುಕವಾಗಿ ಮೌನ
ದಾಚೆಗಿರುವುದು ಸುಶುಪ್ತಿಯ
ಜೀಕು ಹೊದಿಕೆ!
ಸಮಯವಿಲ್ಲ ನನಗೆ,
ಮುತ್ತುಗದ ಕೆಂಪು ಝಳವೋ
ಪಾರಿಜಾತದ ತಂಪು ಬಿಳಿಯೋ?
ಹೊರಡಬೇಕಿದೆ,
ನಗ್ನ ನಾಚಿಕೆಗೇಡು ಗಂಧಗಾಳಿ!
ಬೆಳ್ಳಗೆ ಬೆಳಕಾದಾಗ
ಜಗತ್ತು ನೋಡಿದ್ದು,
ಉನ್ಮತ್ತ ಚಿತ್ತಾದ ಚಿತ್ತಪಕಳೆ,
ಪರಾಗ ಮೆತ್ತಿದ ಕಾಡಿಗೆಕಣ್ಣು,
ಉಗುರುಗೀರಿನ ಮಕರಂದದಾಕ್ರಂದ!
ಅಲಂಕಾರವಿಲ್ಲದೇ
ಕಂಗಾಲಾಗಿ ಕನಲಿ,
ಚಡಪಡಿಸುವಂತಿರುವ,
ಹುಚ್ಚುಚ್ಚಾಗಿ ಅರಳಿದ
ನಿದ್ದೆಗೆಟ್ಟು, ನೀತಿಗೆಟ್ಟ
ಮತಿಭ್ರಮಿತ ಹೂವು!

 

13914125_1772937912951270_4339788816714900537_o

ಈ ಬಾರಿ ’ಕಾವ್ಯ ಸಮಷ್ಟಿ’ಯಲ್ಲಿ ಬಹುಸೂಕ್ಷ್ಮ ಕಥೆಗಾರನೂ ಕವಿಯೂ ಆಗಿರುವ ಆನಂದ ಋಗ್ವೇದಿ ವಿರಚಿತ ಹೊಸ ಐದು ಕವಿತೆಗಳು..

19106011_1777755452241694_5209239165057355087_n

೧. ಪ್ರೀತಿಯ ಅಪೂರ್ಣ ಕವಿತೆಗೆ;

ಎದೆಯ ದುಡಿ ಬಡಿತ
ಮನದ ಮಿಡುಕು ಮಿಡಿತ
ಕರುಳ ಕಳವಳ ಕುದಿತ
ತಣಿಯಲಿ ಈ
ಹೆಗಲೆಣೆಯಲಿ

ಒರಗು ಹೆಗಲಿಗೆ ಬಿಕ್ಕು
ಈ ಎದೆಯ ಬಯಲಿಗೆ

ಸಿಕ್ಕುಗಳ ಸಿಲುಕಿನಲ್ಲಿ
ಬಿಡಿಸಲಾಗದ ಬಂಧದಲ್ಲಿ
ಮುದುಡದಿರಲಿ ಮುದ್ದು ಮುಗುಳು

ಮರುಳೇ, ಮತ್ತೆ ದುಃಖಿಸಿ ಬಿಕ್ಕದಿರು
ಮರಳಿ ಹೆಕ್ಕದಿರು ಉರುಳಿಹೋದ ಮಾತುಗಳ

ಮಾತುಗಳಿಗೆ ದಕ್ಕದು ಈ ಭಾವ
ಸಂಭವ
ವಿವರಿಸಲಾಗದು ಆತ್ಮದ ಅನಂಗ ಸಂಗ

ಜಗದ ಜಾಡುಗಳಲ್ಲಿ ಹೆಜ್ಜೆ ಮೂಡಿಸದ ಈ ಹಾದಿ ಅನಾದಿ ಕಾಲದಿಂದಲೂ ಶಪಿತೆಯರ ಪಾಡು

ಎದೆಯ ಹಾಡ ಹಾದರವೆಂಬ ಈ
ಜಗಕೆ ಮನಸ ಜಾರುವಿಕೆಯೂ ಸಹಜವಲ್ಲದ ಗಹನ!

ಅನುದಿನದ ಅಗ್ನಿ ಪರೀಕ್ಷೆಯಲ್ಲಿ ಸರತಿ ನಿಂತಿದ್ದಾರೆ ಸೀತೆಯರು, ತಮ್ಮದಲ್ಲದ ತಪ್ಪಿಗಾಗಿ ಕೊರಳ ಕೊಟ್ಟ ರೇಣುಕೆಯರು.

ಹೊಸ ಹಗಲು
ಹೊಸ ಭಾಷ್ಯ
ಹೊಸ ಕನಸು ಸಾಧ್ಯವೇ ಎಂಬ ಕನಲುವಿಕೆ ಬೇಡ

ಚಲನೆ ಸಂಚಲನೆ
ಜಗದ ನಿಯಮ!

10521792_1613318192246577_8792939528536590219_n

 

೨. ನಿಜ ನಿಮ್ಮ ಮಾತು ; ಅನುಭವ ಜನ್ಯವೇ ಕವಿತೆ

ನೆಚ್ಚಿನ ನೇಹಿಗನ ಮನ ಮೆಚ್ಚಿದ
ಮನದನ್ನನ ಮದುವೆಯಾಗದ ಅನಿವಾರ್ಯತೆ ಆ ಬಾಲೆಗೆ!

ಮಗಳ ಮಾತ ಕೇಳಿ ಎದೆಯೊಡೆದು ಸತ್ತ ಅಪ್ಪ
ಅಸಹಾಯಕ ಅಮ್ಮನ ಅಳು, ಕಾಲಿಗೆ ತೊಡರಿದ ತಂಗಿ ತಮ್ಮರ ಕರುಳು:
ಗಾಣದೆತ್ತು – ತಲೆ ಎತ್ತದೆ ಸುಮ್ಮನೇ ಒಪ್ಪಿಸಿ ಕೊರಳು!

ನೆತ್ತಿ ಮೇಲೆ ಜೀರಿಗೆ ಅರಳು ಸುರಿದವನೊಂದಿಗೆ ಸಪ್ತಪದಿ
ಉರುಳಿಸಿ ಸೇರಕ್ಕಿ ಹತ್ತಿದ್ದು ಬೆಟ್ಟದ ನೆತ್ತಿ
ನೆಲ ಬಿಟ್ಟು ಮುಗಿಲಿಗೇ ತಾಕುವ ಎತ್ತರದಲ್ಲೂ ಅತಂತ್ರ
ಮೌನವಾಗಿ ಮಾತು ಕೇಳುವುದಷ್ಟೇ ತಂತ್ರ – ಅದು ಮದುವೆಯ ಮಂತ್ರ!

ಮದುವೆಯಾದುದು ದೇಹಕ್ಕೆ ಇನ್ನೂ ಕನ್ಯೆ ಕಣ್ಣಿಗೆ ಕಾಣದ ಮನಸ್ಸು;
ಒಲ್ಲದು ಈ ಭವ ಸಂಭವ
ವಿಧಿ ಧಾರೆಯೆರೆದು ವಿಧಿಸಿದ ಕಟ್ಟಳೆಯಂತೆ ಕೂಡಾವಳಿ
ದಾಂಪತ್ಯದ ನಿದರ್ಶನಕ್ಕೆ ಮಾತ್ರ ಈ ಅವಳಿ!!

ದ್ವಾದಶ ಪರ್ವದಲ್ಲೂ ವಿಷಾದ ಯೋಗ
ಎಂದೂ ಪರಿಹರಿಯದ ವಿರಹ ವ್ಯಾಕುಲ ಮನಸ್ಸು ಒಪ್ಪುವುದೇ ಇಲ್ಲ – ಒದಗಿ ಬಂದವನೆ ಈಗ ತನ್ನ ಬದಗನೆಂದು!!!

ಎಂದೂ ತನ್ನದಾಗದ ವಸ್ತುವ ಬಲವಂತದಿ ಬಳಸಲಾಗದ ಅಪರಿಗ್ರಹನಿಗೆ
ಅನಿವಾರ್ಯ ಬ್ರಹ್ಮಚರ್ಯೆ!

ಎಲ್ಲರೆದುರು ಹೆಗಲ ಬಳಸಿ ಮರೆಯಲ್ಲಿ ದೂರವುಳಿವ ಆಸ್ತೇಯ –
ನಿಷ್ಪಾಪಿ! ಆದರೇನು. . .

ನಿನ್ನೆಗಳು ಉಳಿಸಿದ ಪಳೆಯುಳಿಕೆ
ನಿಡಿದಾದ ಉಸಿರಿನ ನಿರಾಸೆ,
ನೆನಪ ನರಳಿಕೆಗಳೆಲ್ಲ ಇತಿಹಾಸವಾಗುವುದಿಲ್ಲ!!

ಕಣ್ಣೀರ ಪ್ರತಿ ಹನಿಯ ಕತೆಗಳು
ಆತ್ಮಕಥೆಯ ಪುಟ ಸೇರುವುದಿಲ್ಲ!

19105750_1777755608908345_761740526168224007_n

೩. ಇಲ್ಲಿ ಪ್ರತೀ ಹೆಣ್ಣೂ . . ಪಾಂಚಾಲಿ

ಹೆಸರೆತ್ತಿದರೇ ಹೇವರಿಸಿ ಹುಬ್ಬೇರಿಸಬಹುದು ಸನಾತನಿಗಳು!
ಮುಜುಗರದಿ ಮೌನವಾಗುಳಿಯಬಹುದು ಮುಗುದೆಯರು. . .

ಆದರೂ
ಇದು ಸತ್ಯ!

ಎಳವೆಯಲ್ಲಿ ಕಿಶೋರಿಯ ಕಣ್ಣಗಲವೇ ಮುಗಿಲು
ದಿಗಿಲಿಲ್ಲದ ದಿನಮಾನಗಳಿಗೆ ಅವನೇ ದಿನಮಣಿ
ದಿವ್ಯ ಹಿಡಿದ ಆ ತನ್ನ ತಾಯಿಯ ಒಡನಾಡಿ, ಬದುಕೆಂಬ ಬಾನಂಗಳದ ಬಾನಾಡಿ – ಪರುಷ!

ಕಿಶೋರಿಗೆ ಕನಸ ಮನಸ ತುಂಬೆಲ್ಲಾ
ಅವನೇ; ಆಪ್ತ ಬಂಧು. ಸರೀಕ ಹುಡುಗರಂತಲ್ಲದ ಆ
ಗಡಸು ದನಿಯಲ್ಲೂ ಮಾರ್ದವತೆ!
ಗಂಡಸೆಂದರೆ ಹೀಗಿರಬೇಕೆಂಬ ಆದರ್ಶ – ಪ್ರಥಮ ಪುರುಷ : ಯುಧಿಷ್ಠಿರ!

ಹೊಸ ಹರೆಯದ ಬೆರಗು ಆ ಸಹಯಾನಿ; ಕಣ್ಣಲ್ಲೆ ಕಚಗುಳಿ ಇಕ್ಕಿ ಕಿಚ್ಚೆಬ್ಬಿಸುವ, ಕಳವಳ ಗುರುತಿಸಿ ನೋಟದಲ್ಲೇ ನೇವರಿಸುವ – ಥೇಟ್ ಅಮ್ಮನಂತಹ ಹುಡುಗ!

ತನ್ನಿತರೆ ಸಖಿಯರಿಗೂ ಸ್ಪಂದಿಸುವ ಆ ಮೋಹಕ ಪಾವಕ ಸುಳಿದೆಡೆಗೆಲ್ಲಾ ಕಣ್ಣು ಹೊರಳಿ, ಕಸಿವಿಸಿಗೊಳ್ಳುವ ಕರುಳು ಅರ್ಥವಾಗದ ಬೇಗೆ ಮೂಡಿಸುವವ – ಪಾರ್ಥ!!

ತನ್ನ ಸು-ಭದ್ರೆಯ ಹುಡುಕಿ ಹೊರಟು ಹೋದವನ ಬೆನ್ನಿಗೆ ಒಂದು ನಿಡು ಸುಯ್ಲು
ನೆತ್ತಿಯ ಮೇಲೆ ಜೀರಿಗೆ ಅರಳು ಸುರಿದವನಿಗೆ ಕೊಟ್ಟು ಕೊರಳು ಹೊರಳಿ ನೋಡದ ಆ ದಾರಿಯಲಿ ಜೊತೆಯಾದವ ಬಲ ಭದ್ರ

ತನ್ನರಸಿಯ ಮನದಿಂಗಿತ ಅರಿವ ಸೂಕ್ಷ್ಮತೆ ಆ ಅಜಾನುಬಾಹುವಿಗೆ!
ಆಶಿಸಿದ ಸೌಗಂಧಿಕಾ ಪುಷ್ಪಕ್ಕಾಗಿ ನೂರಾರು ಯೋಜನ ಕ್ರಮಿಸಿ ತುರುಬಿಗಿಡುವ, ತೊಡರುವ ಕೀಚಕರ ನಿವಾರಿಸುವ ನೇಹಿಗ-
ಭೀಮ ಕಾಯ!

ಮಧುರ ಮಾತು ಕೃತಿ, ತುರುಗಳ ಎಲ್ಲಾ
ರಹಸ್ಯ ಬಲ್ಲ ತರುಲತೆಯಂತಹ ಸಖ: ಸಹ ಉದ್ಯೋಗಿ
ಮನದರಸನ ಕಿರಿಯ ಅನುಜನಂತಹ ಬಂಧು
ಹೇಳದೆಯೇ ಕೇಳುವ, ಕೇಳದೆಯೇ ಕೊಡುವ
ನಿಟ್ಟುಸಿರ ಘಳಿಗೆಗಳಿಗೆ ನೆರಳು – ನಕುಲ.

ಮಗನಲ್ಲ – ಇವ ಮಗನ ವಯಸ್ಸಿನ ಬೆರಳು! ನಡು ವಯಸ್ಸಿನ ತುಡಿತ ತಳಮಳ ಬದುಕ ಹೊಕ್ಕು ಮನಸು ಮರುಗದಂತೆ ಹದವರಿತ ಹೆಜ್ಜೆ. ನಡೆಗೆ ಮುಡಿ ಹಾಸಿದಂತೆ ನಡವಳಿಕೆ
ಬೇಸರ ಬವಳಿ ಬಂದಳಿಕೆಗಳಿಗೆ ಸದಾ ಕೈವರೆವ ಸಹಚರ – ಸಹದೇವ

ಇವಳ ಅಂತರಂಗದ ಅಂಗಳದಲ್ಲಿ ಇಂತಹವೇ ನೂರಾರು ಹೆಜ್ಜೆ
ಗೆಜ್ಜೆ ಸಪ್ಪಳವಿಲ್ಲದ ಗುಜು ಗುಜು ಗರಜಿಲ್ಲದ ಪರಿವೇಷ!

ಯಾವ ಜಮದಗ್ನಿಯ ಕೋಪ ಕಟ್ಟಳೆಗಳು
ಪರಶುರಾಮರ ಕೊಡಲಿ ಪೆಟ್ಟುಗಳೂ ತಟೆಗಟ್ಟವು ಅಂತರಂಗದೊಳಗೆ
‘ಅವಳ ಪುರುಷರ’ ಪ್ರವೇಶ!!

13698177_1766043136974081_6966019183753511680_o

೪. ಶತಮಾನದಿಂದ ಈ ಹನಿ

ಹೀಗೇ ಒಸರಿ ನಿಂತಿದೆ; ಭಾವ ಬನಿ
ಎಂದೂ ಬತ್ತಲಾರದ ಗಂಗೆ!

ಎದೆಗಡಲ ಮಥನದಲಿ ಹೊಮ್ಮಿದ
ಅವ್ಯಕ್ತ ಅನಾಹತದ ಮೂರ್ತ ರೂಪ ಈ ಹರಳು
ಉರುಳದೇ
ಹಗಲಿರುಳು ಏಕಾಂತದ ಹೊರಳು

ಚಿಮ್ಮುವ ಉತ್ಕಟತೆ ಕತೆಯಾಗಿವೆ
ಬವರದಲಿ ಕಾದವರ ಕಥೆಗಳಿವೆ
ಬೆವರ ಉದಕದಲಿ ನೆಂದವರ
ಬರಿದೇ ನೊಂದವರ ಅವರ ಇವರ

ಕಥಾನಕಗಳ ಭಾರ ಈ ಕಂಬನಿಗಿಲ್ಲ;
ಒಂದು ನಿಡಿದಾದ ಸುಯ್ಲು
ಕಣ್ಣಪನಿಗಳ ಕೊಯ್ಲು ಹೇಳುವುದು
ಕತೆಯಷ್ಟೇ ಅಲ್ಲ!
ಕತೆಗೆ ಕಣ್ಣ ಕ್ಷಿತಿಜ
ಸಾಕಾಗುವುದಿಲ್ಲ!!

14595768_1797120317199696_3579533160876648920_n

೫. ಪ್ರತಿ ಋತುವಿಗೂ ತನ್ನದೇ ತಾನ

ಚೈತ್ರಕ್ಕೆ ಚಿಗುರೊಡೆದು ದುಂಬಿಗಾನ
ವಿಚಿತ್ರ ಬೇಗೆಯಲ್ಲೂ ಅರಳುವ ವಸಂತದ
ಘಮದ ಹಾಗೆ – ವೈಶಾಖ!

ವರ್ಷ ಋತು ಮೈದುಂಬಿ
ಕೊರೆದು ಕುಳಿರ್ಗಾಳಿಯ
ಶಿಶಿರ ಕಚಗುಳಿಯಿಟ್ಟು ಉದುರಿಸಿದ ಪಕಳೆಗಳ
ಹಾರಿಸಿದ ನವ ರಾತ್ರಿಗಳು – ತುಂಬಾ ದೀರ್ಘ
ದೀವಳಿಗೆಯ ಕಣ್ಣ ಹಣತೆ ಮಿನುಗಿಯೂ ಕರಗದ ಕತ್ತಲು
ಕಾರ್ತೀಕ!!

ಎಲ್ಲಾ ಋತುಗಳಿಗೂ ಪಾಯಕ ಈ ಪವನ; ಪುಳಕದ
ಪ್ರತಿ ನಡೆ ನಿಲ್ಲದಂತೆ ಸುಳಿವ, ಆಷಾಡದಿ ಮದುವಣಗಿತ್ತಿಯ ತವರು
ಮನೆ ಸೇರಿಸಿ ಭೋರ್ಗರೆವ, ಮೂಡಣದಿಂದ ಮೈ ಕೊರೆವ
ಬಡಗದಿಂದ ಮೊರೆವ ತಂಬೆಲರು
ತಬ್ಬಿ ನೀಡುವ ಸುಖ – ಈ ಸರ್ವ ಋತುವಿನ ಸಖ!

ಅಂದಂದಿಗೆ ದಕ್ಕಿದ ಈ ಎಲರ ಕಂಪು
ಘಮದ ಕಂಪು ಸಾಕು
ದಂದುಗದ ಈ ದಾರಿ ಸವೆಯಲು
ದಾರಿ ಹೋಕ ನಾನು
ದೂರುಗಳಿಲ್ಲ ಯಾರ ಮೇಲೂ ಸಿಗ್ಗಲ್ಲಿಯೂ
ಸಿಕ್ಕಿ ದಕ್ಕಿದ್ದಷ್ಟಕ್ಕೇ ಸಂತೃಪ್ತ

12552760_1254309097919668_8588208852555204799_n

’ಕಾವ್ಯ ಸಮಷ್ಟಿ’ಯಲ್ಲಿ ಈ ಬಾರಿ ಸರಕಾರಿ ಪದವಿಪೂರ್ವ ಕಾಲೇಜು, ದಾಂಡೇಲಿಯಲ್ಲಿ ಉಪನ್ಯಾಸಕಿಯಾಗಿರುವ ಕವಿ ನಾಗರೇಖಾ ಗಾಂವಕಾರ ಅವರ ಐದು ಕವಿತೆಗಳು

16143025_1082571555199234_5280314645110841533_n

*ನಾಗರೇಖಾ ಗಾಂವಕಾರ

ಆಳದ ಅರಿವು

ಆಳದ ನೆಲೆಯಲ್ಲಿ ಕವಲುಗಳ
ಕುಸುರಿ ಕುಂದುವುದಿಲ್ಲ
ಅಧಿತ್ವದ ಸೊಗಸು ಜಡತ್ವ ಮೂಡದ
ಜಗಮಗಿಸುವ ಬೆಳಕು
ಸ್ವಯಂ ಸ್ಪೂರ್ತಿ ಸೆಲೆಯ
ಅರಗಿಸಿ ದಕ್ಕಿಸಿಕೊಳ್ಳಬೇಕು

ಹೆರಳೆಣ್ಣೆ ಗಾಢಾಗಿ ಉರಿದರೆ
ಕಡುಕಪ್ಪು ಕಾಡಿಗೆ
ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ

ಹೊಸ ಸಂಕೇತಗಳಿಗೆ
ಹಳೆಯ ಸನ್ನೆಗಳೇ ಆಳ ಬಿಂಬಗಳು
ಕೂಡಿ ಕಳೆವ ಬಾಗಿಸಿ ಗುಣಿಸುವ
ಲೆಕ್ಕ ಮಾಪನಗಳು
ಆಳದ ತೀವ್ರತೆಯ ಚುಕ್ಕಿಗಳು

ಆಳದ ಹೊರಮೈ ಒಳಮೈ
ಮೇಲೆ ಕೆಳಗೆ ಎಲ್ಲ ಕಡೆಯ
ಸಿಕ್ಕು ಬಸಿದು ನೆಕ್ಕಿ ಉಕ್ಕಬೇಕು ಒಳಗಿನ
ವೀಣೆಯ ತಂತಿ ಮೀಟುವ ರಾಗಕ್ಕೆ
ನಿತಾಂತ ಹೊಸ ಚಿಗುರು ಬಣ್ಣಗೂಡುತ್ತಿರಬೇಕು

ಎದೆಗಿಳಿದ ಅಕ್ಷರಗಳು
ಶೋಕೇಸಿನ ಕಪಾಟಿನಲ್ಲಿ
ಗಾಜಿನ ಕೋಣೆಯಲ್ಲಿ ತಳಮಳಿಸುವ ಪದಕವಾಗಲ್ಲ
ನೆಲಕ್ಕಿಳಿಯಬೇಕು ಕೆಸರ ಕೊಳದ ನೈದಿಲೆಯಾಗಬೇಕು
ಬೆಳಕಿನ ಹಾಡ ಹೊಮ್ಮಿಸಬೇಕು

ಆಳಕ್ಕಿಳಿದಷ್ಟೂ ಬಿಸಿಲ ತಣ್ಣಗೆ ಸವಿವ
ಸರಳತೆಯ ಇನಿತಿನಿತು
ಕರಗಿಸಿಕೊಳ್ಳಬೇಕು , ಅದಕ್ಕೆ ಆಳದ ಅರಿವ
ನಾನರಿತುಕೊಳ್ಳಬೇಕು

10923583_1561572254087838_1629321495763991787_n

ಒಲೆಗಳು ಬದಲಾಗಿವೆ

ಒಲೆಗಳು ಬದಲಾಗಿವೆ ಹೊಸ ರೂಪ
ಆಡಂಬರದ ಬಿಂಕ ಬಿನ್ನಾಣ ಮೈತೆತ್ತು
ಉರಿ ಬದಲಾಗಿದೆಯೇ?
ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ
ಹೊಳಪು ಕಂದಿದೆಯೇ?
ಕಳೆಗುಂದಿದರೆ
ಬೇಯಿಸುವ ಕೈಗಳು
ಕೆಲಸ ಕಳೆದುಕೊಳ್ಳುತ್ತದೆ
ಕೈಬಳೆಯ ನಿಟ್ಟುಸಿರ ಗಾಳಿಯೂ
ದೀರ್ಘವಾಗುತ್ತದೆ
ಹಸಿದ ಹೊಟ್ಟೆಗಳು
ಬೆಂಕಿಯುಗುಳುತ್ತವೆ
ಎಳೆಗೂಸಿನ ಹಾಲು ಸಮ ಉಷ್ಣತೆಯ
ಹೀರದೇ ರೋಗಾಣು ವೈರಾಣುಗಳು
ಪ್ರಾಣ ಹೀರುತ್ತವೆ
ಹೊಟೆಲ್ಲಿನ ಗಲ್ಲಾ ಪೆಟ್ಟಿಗೆಗೆ
ನುಸಿ ಮುತ್ತುತ್ತವೆ
ಆಗಲಿ ಬೇಕಾದರೆ ಒಲೆಯ
ನಮೂನೆ ಚಿಮಣಿ ತೊಟ್ಟು
ಧೂಮ ನಿವಾರಕ ಹೊತ್ತು
ಫ್ಯಾಷನ್ನಿನ ಒವನ್ ಆಗಿ
ಬದಲಾಗದೇ ಇರಲಿ ಉರಿಯ
ಒಡಲು ಅದೇ ಬೆಂಕಿ ಕಡಲು

14947662_206368533134031_3085470453372441156_n

ಮಾತ್ರಿಯೋಷ್ಕಿ

ಮಾತ್ರಿಯೋಷ್ಕಿ ಮಾಸ್ಕೋದ
ಬೀದಿ ಬೀದಿಯ ಗೊಂಬೆ
ಗೊಂಬೆಯೊಳಗೊಂದು ಗೊಂಬೆ
ಒಂದರೊಳಗೊಂದು ಆದಷ್ಟು ಕುಬ್ಜ
ಆದರೂ ಕುಲುಕಾಟ ಒಳಗೊಳಗೆ
ಗೋರ್ಬಚೇವ್ ನ ಗೊಂಬೆ
ಅದರೊಳಗೆ ಬ್ರೇಜ್ನೇವನ ಗೊಂಬೆ
ಒಳಗೆ ಕ್ರುಶ್ಚೇವನ ಗೊಂಬೆ
ಮತೂ ಒಳಗೆ ಸ್ಟಾಲಿನನ ಗೊಂಬೆ
ತೊಗಲುಗೊಂಬೆಯ ಆಟ

ಈಗ ಭಾರತದ ಗೊಂಬೆ
ನರೇಂದ್ರ ಮೋದಿಯ ನಯವಂತಿಕೆಯ ಗೊಂಬೆ
ಮನಮೋಹನನ ಮುತ್ಸದ್ಧಿ ಗೊಂಬೆ
ಚಂದ್ರಶೇಖರರ ಚುರುಕು ಗೊಂಬೆ
ಮತ್ತೂ ಒಳಗೆ ಇಂದಿರಮ್ಮನ ಇಂಗದ
ಮುಖ ಕಾಂತಿಯ ಗೊಂಬೆ
ಮತ್ತೂ ಒಳಗೆ ಗರ್ಭದಲ್ಲಿ ಜಬರದಸ್ತ
ಜವಾಹರರ ಗೊಂಬೆ
ಸಾಹಿತ್ಯದಲ್ಲೂ ಅದೇ ಗೊಂಬೆಯಾಟ
ಮಾತ್ರಿಯೋಷ್ಕಿ ಮಾಯಾಮಾಟ
ಭೈರಪ್ಪನವರ ಗೊಂಬೆ
ಅದರೊಳಗೆ ಕುವೆಂಪು ಗೊಂಬೆ
ಒಳಗವಿಯಲಿ ಪಂಪಕವಿಯ ಗೊಂಬೆ
ಮೂಲಬಿಂಬ ವ್ಯಾಸ ಮಹರ್ಷಿಯ ಗೊಂಬೆ
ಅದೇ ಗೊಂಬೆ ತದ್ರೂಪದ ಗೊಂಬೆ
ವ್ಯತ್ಯಾಸಗೊಂಡ ಆಕಾರವೆಂಬುದಷ್ಟೇ ಭಿನ್ನತೆ
ಮಾತ್ರಿಯೋಷ್ಕಿ ಮಾಂತ್ರಿಕ ಕಲೆ
ಜಗತ್ತಿನೊಳಗೆ ಅದರದೇ ಬಲೆ

10575312_1710535352524860_841307784882477219_o

ಜೋಲಿಯಾಟದ ಜಗತ್ತು

ಆಗೊಮ್ಮೆ ಈಗೊಮ್ಮೆ ಜಗದ
ನಿಯಮಗಳು ಬದಲಾಗುತ್ತವೆ
ಬಿಸಿನೀರಿನಲ್ಲೂ ಜೀವಜಗತ್ತು
ತೆರೆದುಕೊಳ್ಳುತ್ತದೆ

ಸಾಗರದ ಬುಡವೂ ನಿಗಿ ನಿಗಿ ಉರಿಯುತ್ತದೆ
ಎದೆಯ ಕಡಲಿಗೂ ಬೆಂಕಿ
ಇಳಿಯುತ್ತದೆ
ಅನ್ವೇಷಣೆಯ ಆಲಂಬನ
ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ
ದೃಷ್ಟಾರರು ನೆಪಮಾತ್ರ ಆಗಿಬಿಡುತ್ತಾರೆ

ಮಾತು ಸತ್ತ ಮನಸ್ಸುಗಳು
ಭಾವ ಶೂನ್ಯತೆಯಲ್ಲಿ ರೂಪಾಂತರಗೊಳ್ಳುತ್ತವೆ
ಕರಕಲು ಕಲ್ಲಿದ್ದಲಿ ರಾಶಿ ಕೆಂಡದಂಗಡಿ
ಮೇಲಿಂದ ಮೇಲೆ ಎದ್ದು ಒಳಹೊರಗಿನ ರತ್ನಗಂಬಳಿಗಳು
ಕೊಚ್ಚೆ ಮೆತ್ತಿಕೊಂಡಿವೆ

ಅಷರದ ನೆಲೆಯಲ್ಲೂ ರೂಕ್ಷ
ರಕ್ತ ಪಿಪಾಸುಗಳು
ಮಾಂಸಕೆ ಮುತ್ತುವ ನೊಣಗಳು
ಮೈತಾಳುತ್ತವೆ

ಸಂತೆಯಲ್ಲಿ ಅಪ್ಪಚ್ಚಿಯಾಗುತ್ತವೆ
ಹಾರುವ ಅಭಿಲಾಷೆ ಗೆರೆ ಕೈಕಟ್ಟಿಕೊಂಡ
ಚಿಟ್ಟೆಗಳು
ಪ್ರೇಮ ಮತ್ತು ಮಸಣಗಳು
ಒಂದೇ ತೊಟ್ಟಿಲಲ್ಲಿ ಜೋಕಾಲಿಯಾಡುತ್ತವೆ

17635308_1232144573550597_4163698201938473350_o

ಹೇ ಪಾರಿಜಾತ

ನವಿರು ಹೊದಿಕೆ ಎಸಳು
ಇನಿದಾದ ಅಂಪಿನುಸಿರು
ತಂಪು ಬಸಿರು ಸ್ವರ್ಗ ಸಂಜಾತೆ

ಹೂವಿನ ಕೊರಳೊಳಗಿನ
ದ್ವನಿತಂತುಗಳಲ್ಲಿ
ಮಾತಿಗೆ ನಿಕುಲದಂತೆ
ಮೌನ ಹಾಡು

ತಿಂಗಳನ ದಿಟ್ಟಿಗೆ
ಬಿದ್ದೊಡನೆ ಮಧು ಭಾರಕ್ಕೆ
ಉಗುಳು ನುಂಗುತ್ತ
ಅಪ್ಪುಗೆಯ ಬಿಸುಪಿಗೆ
ನರಳಿ ಅರಳಿ
ಪುಷ್ಪ ಪರಾತ ಬುಟ್ಟಿ
ದಿನಕರಗೆ ಆರತಿ

ಬುಡದ ತುಂಬೆಲ್ಲ ಮುತ್ತುಗಳು
ಹರಡಿ ಚೆಲ್ಲಿವೆ
ಮುತ್ತಿಕ್ಕುವ ಬಯಕೆ ಉಕ್ಕಿಸುವ
ಅಮಲುಗೊಳಿಸುವ ಉನ್ಮಲಿತ ಭಾವ
ಮೈಗಂಧವತಿ
ಅವಳೇ ಹಾಕಿದ ಚಿತ್ತಾರ
ಉಟ್ಟ ಶ್ವೇತಪತ್ತಲ
ನಾಭಿ ಲೋಕದ ಕೆಂಬಣ್ಣ
ಮರಳುಗೊಳಿಸುವ
ಮನ ಮಾಲಿನಿ ಕಶ್ಯಪನರಮಣಿ

ವಿರಸ ಉಕ್ಕಿಸಿ ಸರಸ ಬೆಸೆದ
ಕಥೆ ಹಳೆಯದೇ ಆಗಾಗ
ಇಂದಿಗೂ ಶ್ರೀಕೃಷ್ಣ ಪಾರಿಜಾತ
ಅವರಿವರ ಮನೆಗಳಲ್ಲಿ ಮನಗಳಲ್ಲಿ
ಅದಕ್ಕೆ ಪಾರಿಜಾತ
ನಿನ್ನೊಲುಮೆ ರಾಗದ್ವೀಪ

11807697_1640783752833354_3566226041407648689_o

 

 

 

 

 

’ಕಾವ್ಯ ಸಮಷ್ಟಿ’ ಯಲ್ಲಿ ಈ ವಾರ ಚಿಂತನಶೀಲ ಕವಿ, ಹೊರನಾಡ ಕನ್ನಡಿಗ ವಾಸುದೇವ ನಾಡಿಗ ಅವರ ಐದು ಹೊಸ ಕವಿತೆಗಳು

14202483_1051039404949325_2733577510892303080_n

ಬೆಳಕು ಮತ್ತು ಹುಳ

ಮುಳ್ಳ ಕಂಟಿಯ ಬಳಿ ಹಾರಿದರೂ
ಹರಿಯಲಿಲ್ಲ ಪುಟ್ಟ ರೆಕ್ಕೆ
ಕೊತ ಕೊತ ಕುದ್ದ ಮೊಟ್ಟೆಯೀಚೆ
ಎದ್ದ ಎಳೆ ಜಗವನೇ ಸುತ್ತಿಕೊಂಡಿತು
ಕಣ್ಣ ರೆಪ್ಪೆಯ ಮೇಲೆ ಜತನ
ಕೂಡಿಸಿಕೊಂಡು ಬಂದೆ ಮಿಂಚುಹುಳವ
ರೇಷ್ಮೆ ಎಳೆಯೊಂದು ಎದೆಯ ಮೀಟಿತು
ಬೆಳಗಿನಲ್ಲಿ ಬೆಳಕಿನ ಹೊಟ್ಟೆ
ಹೊಟ್ಟೆಪಾಡಿನ ಕತೆ ಬರೆಯಿತು
ಕತ್ತಲನ್ನೇ ಪ್ರೇಮಿಸುವ ಕವಿ
ಬೆಳಕಲೂ ಕುರುಡಾದ
ತಬ್ಬಿಬ್ಬುಗೊಳಿಸುವ ಕತ್ತಲು ಬೆಳಕುಗಳು
ಜಗವನು ನುಂಗಿ ನೀರುಕುಡಿದವು

ಹೇಗೋ ಬೆನ್ನ ಹಿಂದೆಯೇ ಬಂದ ಮಿಂಚುಹುಳ
ಒಳಕೋಣೆಯ ಸೇರಿತು
ಹೃದಯ ಕವಾಟವ ಮೆಟ್ಟಿಲು ಮಾಡಿಕೊಂಡು
ಏರಿದ ಏರಿಳಿತಗಳಿಗೆ ಕಸ ಕಾಲ್ಕಿತ್ತಿತು
ಒಳಗೆಲ್ಲ ಹರಿದ ಬೆಳಕಿನ ಪಾದ
ಪದಗಳ ಕೂಡ ಮಾತಿಗೆ ಕೂತಿತು
ಒಲೆಯ ಬಳಿ ಕೂತು ಅನ್ನ ಬೇಯಿಸಿತು
ಹಣತೆಯ ಸವರಿ ಬೆಳಕ ಊಡಿಸಿತು
ನಡುಕ ನರಗಳಲಿ ಬಿಸಿ ಹುಯ್ದಿತು
ಬಟ್ಟೆ ಒಣಗಿಸಿತು ಲೋಬಾನ ಹಚ್ಚಿತು
ಒಡಲ ಕಾಪಿಟ್ಟಿತು ಕಂಗಳ ಹರಸಿತು
ಹೇಗೋ ಒಳಗೆ ಠಿಕಾಣಿ ಹೂಡಿದ ಹುಳು
ಬೆಳಕಿನ ಮೇಳವ ಕಟ್ಟಿತು

ಕತ್ತಲೆ ಕುರಿತ ಬಿಟ್ಟುಕೊಂಡ ಹುಳದ
ಕೂಅ ಬರೀ ಜಗಳವೀಗ
ಮೆದುಳ ತೊರೆಗಳಲಿ ಬರೀ ಅರಿವ ಹರಿಗೋಲು
ಬಿಟ್ಟುಕೊಂಡ ಹುಳು ಬದುಕ ಆಳಿತು
ಮೂಲೆಯಲಿ ಮುರುಟಿ ಕೂತ ಕಂಬಳಿ ಹುಳ
ಎಚ್ಚರಿಸಿದಾಗಲೆಲ್ಲ
ಜೀ ಹುಜೂರ್ ಮುಂಚುಹುಳ ಹಾಜರ್
ಕಣ್ಣ ರೆಪ್ಪೆ ಮೇನೆ ಮೇಲೆ ಕೂತ ಬೆಳಕು
ಬೀದಿಗಳನ್ನು ಹಾದುಹೋಗುತ್ತಿದೆ
ಕತ್ತಿ ಮಸೆಯುತ್ತಿರುವ ಕತ್ತಲ ಸೈನ್ಯ
ಇನ್ನೇನು ಸೋಲುವುದೊಂದೇ ಬಾಕಿ
**

scaly beasted munia

ಮೌನದ ಕತ್ತು ಹಿಸುಕುವ ಮಾತು ನಾನು

ಜನನಿಬಿಡ ಗದ್ದಲದ ಬೀದಿ ಮೂಲೆಯಲ್ಲಿ
ಬಿಕ್ಕಳಿಸುತ್ತಿದ್ದ ಮೌನವ ಅಪ್ಪಿಕೊಂಡು ತಂದೆ
ಒರೆಸಿದ ಕಣ್ಣುಗಳ, ಸವರಿದೆ ಕರುಳ
ಆದ ಗಾಯಗಳಿಗೆ ಮುಲಾಮು ಹಚ್ಚಿದೆ
ತುಳಿತಕ್ಕೆ ಹಸಿರುಗಟ್ಟಿದ ಕಡೆ ಕಾವುಕೊಟ್ಟೆ
ಬಾವುಗಳಿಗೆ ಹಿತ ಬಿಸಿನೀರು ಸುರಿದೆ
ಬಿಟ್ಟುಹೋಗಲೊಲ್ಲದ ಮೌನ ಒಳಗೆ ಗೂಡ ಕಟ್ಟಿತು
ಹೊಳೆವ ಅದರ ಕಂಗಳಲ್ಲಿನ ಅರ್ಥಗಳಿಗೆ ಪದಕೊಟ್ಟೆ
ಕವಿತೆಯಾಯಿತು ಕತೆಯಾಯಿತು ಮುಗಿಯದ ಸಾಲಾಯಿತು

ಒಂಟಿ ಮನೆಯಲ್ಲೀಗ ನಾನು ಮತ್ತು ಮೌನ
ನನ್ನ ಒಣ ಮಾತುಗಳಿಗೆ ಈಗ ಮೌನ ಸಿಡುಕುತ್ತಿದೆ
ವೃಥಾ ಹರಟುವ ನನ್ನ ಖಯಾಲಿಗೆ ಮೂತಿ ಸಿಂಡರಿಸಿದೆ
ಜನನಿಬಿಡ ಗದ್ದಲದ ಬೀದಿಯಲಿ ಇದು ದೊರೆವ ಮುನ್ನ
ಒಂಟಿಯಾಗಿದ್ದೆ ನಾನು ಮಾತೆಂದರೆ ಅರಿಯದೆ
ಕಾಡಿನಿಂದ ಹೊತ್ತು ತಂದ ಮೌನ ಹಕ್ಕಿ ಮುನಿದಿದೆ
ಒಣ ಮಾತುಗಳಲ್ಲಿ ನಮೆಯುತಿರುವೆ ನಾನು
ಮೌನದ ಪರಿಚಯ ಆದಾಗಿನಿಂದ ಬರೀ ಮಾತಿನ ವ್ಯಸನ
ಮೌನದ ಕುರಿತು ಬರೆಯುತ್ತ ಹೋದ ವಾಚಾಳಿ

ದುಮುಗುಡುವ ಮೆದುಳ ಸಂತೆಯಲ್ಲೀಗ ಬರಿ ಗದ್ದಲ
ನಿಶಬ್ದದ ಬಗೆಗೆ ಹರಿದ ಭಾಷಣಗಳಲ್ಲಿ ಪದಹತ್ಯೆ
ಮಂದ ಬೆಳಕಿನ ನೀಲಾಂಜನದ ಸುತ್ತ ಕೀಟನರ್ತನ
ಏಕಾಂತದ ಕೋಣೆಯಲ್ಲೀಗ ಜಾತ್ರೆಯ ತೇರು
ಮುಗಿಬಿದ್ದ ಜನರ ನಡುವೆ ಮತ್ತೆ ಅನಾಥ ಮೌನ
ಅದ ಮಾತಾಡಿಸಿದವನ ದಿನಚರಿಯಲಿ ಕೇವಲ ಮಾತು
ಪದಗಳು ವ್ಯಯವಾಗುವ ಗಳಿಗೆಯಲ್ಲಿ ಅರ್ಥದ ಸಾವು
ಹೊತ್ತು ತಂದಿದ್ದ ಮೌನ ಮಗುವಿನ ಕೂಡ ತಗಾದೆ
ಚೂರು ಬಿರುಕಿನಲಿ ಕಂಡ ಮೊಳಕೆ ಈಗ ಹೆಜ್ಜಾಲ

ಮೌನದ ಕುರಿತ ನನ್ನ ಶೋಧವೆಲ್ಲ ಗದ್ದಲಗಳ ತಾಕುತ್ತಿದೆ
ಅನುಕ್ತ ಪದಗಳ ದಾರಿಗಳು ಛೇ ಎಲ್ಲ ವಿವರಿಸುತ್ತಿವೆ
ಜತನವಾಗಿ ಕಾಪಿಡಬೇಕು ಈ ಮೌನವನು ಹೊರಗೆ ಮಾತು ಕತ್ತಿ ಮಸೆಯುತ್ತಿದೆ

**

13620052_998541693576591_8686338189930097868_n
ಉಡದೇ ಉಳಿದು ನಿಂತ ಬಯಲು

ಎದುರು ಕಾಣುವ ಮರಕ್ಕೆ ರಗಳೆ ಗೊತ್ತಿಲ್ಲ
ಮರುಗುವುದಿಲ್ಲ ಬಯಲ ಬೆತ್ತಲೆಗೆ
ಚಳಿಗೆ ಹೊದೆಯಲಿಲ್ಲ ಕಂಬಳಿ
ತೊಡಲಿಲ್ಲ ಬೇಸಗೆಗೆ ಅರಳೆ
ಮಳೆಗೆ ಸೋರಲಿಲ್ಲ ಮೂಗ ಹೊಳ್ಳೆ
ಬೆತ್ತಲೆ ಜಗತ್ತಿನಲಿ ಹರಿವ ತೃಪ್ತ ತೊರೆ
ಇರದುದರ ಪ್ರತಿ ಉಸಿರಲಿ ಇರುವ ನಿಧಿ

ಕಣ್ಣೆದುರಲ್ಲೇ ಊರ್ಧ್ವಮುಖ ಅಂಬೆಗಾಲು
ಮಗು ಸಸಿ ಸರಿದೇ ಬಿಟ್ಟಿತು
ಪ್ರತಿ ವಸಂತನ ಪ್ರಣಯಕೆ ಹಾತೊರೆದ ಬೇರು
ಮುತ್ತಿಟ್ಟ ಬೆತ್ತಲೆ ಹಕ್ಕಿ ಬೆತ್ತಲೆ ಚಿಟ್ಟೆಗಳು
ಗಾಳಿಯು ಏನು ಉಸುರಿತೋ ಕಿವಿಯಲಿ
ಸವರಿ ಕೆನ್ನೆಗೆ ಕಾಲ ಕಾವ್ಯದ ಮೊದಲ ಸಾಲೊಂದ
ಮೋಹಗಳಾಚೆ ಕೈಬೀಸಿ ಕರೆವ ನುಡಿದಡ

ಪ್ರತಿಋತುವಿಗೂ ವೇಷ ಬದಲಿಸುವ ಉಸಿರು
ಬಟಾಬಯಲಲಿ ಬೆರೆದ ನಗ್ನ ದಂಡು
ಹಸು ಕುರಿ ಎಮ್ಮೆ ಹಾವು ಮುಂಗುಸಿ ಹುಲಿ ಸಿಂಹ
ಆನೆ ಆಮೆ ಗಿರಿ ಶಿಖರ ವಸ್ತ್ರ ತೊಡಲಿಲ್ಲ
ಕಿವಿಗಡಚಿಕ್ಕುವ ಗುಡುಗು ಕ್ರುದ್ಧ ಬಿಸಿಲು
ರಕ್ತ ಹೆಪ್ಪುಗಟ್ಟಿಸುವ ಶಿಶಿರ ಕೂದಲ ಕೊಂಕಿಸಲಿಲ್ಲ
ಪ್ರತಿ ಋತುವಿನ ಜೊತೆಗೂ ಹೆಗಲ ಚಾಚು

ಮನೆಯೆದುರಿನ ಕೂಸು ಸಸಿ ಮರವಾಗಿ
ಹಸಿರು ಹಳದಿಯಾಗಿ ಹಳದಿ ಜನ್ಮಾಂತರದ ಧಾತುವಾಗಿ
ಬಯಲ ಗದ್ದಲ ಗಳಿಗೆಲ್ಲ ಗೆದ್ದ ಸಾಕ್ಷಿಯಾಗಿ
ಕಟ್ಟಿದ ಗೂಡ ಕಳೆದುಕೊಂಡ ಹಕಿಯ ಅಶ್ರುವಾಗಿ
ಮೊಟ್ಟೆಯಲ್ಲಿ ಮುಖ ಮೂಡಿರುವ ಜೀವಕೆ ಬಿಂಬವಾಗಿ
ತಿಂದ ಪೆಟ್ಟು ಮೆದ್ದ ಬೆಣ್ಣೆಗಳಿಗೆಲ್ಲ ಪರಿವಿಡಿಯಾಗಿ
ಬಟ್ಟೆ ತೊಟ್ಟುಕೊಂಡು ಕೊರಗುವವರ ಸಾಂತ್ವನಕೆ ಪುಸ್ತಕವಾಗಿ

ಮನೆಯೆದುರಿನ ಬತ್ತಲೆ ಮರ
ತಂದು ಹಾಕಿದೆ ರಾಶಿ ಉಡುಪುಗಳ
ಹರಡಿಕೊಂಡು ಕೂತಿರುವೆ.. ಬಯಲು ಅಣಕಿಸುತ್ತಿದೆ

**

 

17630119_1240811095972154_7824771522890486071_n

ಪ್ರತಿ ಪ್ರೇಮ ಗ್ರಂಥದ ಒಂದು ಖಾಲಿಪುಟ

ಕಂಡ ಕ್ಷಣವೇ ಬೆಳಗಿದ ಎದೆ ದೀಪ
ಸಾಂಗತ್ಯವೊಂದರಲೇ ಹೊಂಗೆಯ ಹಿತ
ದಮನಿ ದಮನಿಗಳ ತುಂಬೆಲ್ಲ ಜನ್ಮ ಜನ್ಮಾಂತರದ ನದಿಹರವು

ಯಾಕೆ ಹುಟ್ಟಿತೋ ಈ ಹಾಡು
ಅಂಗಳದ ತುಂಬೆಲ್ಲ ಬರಿ ಕಂಪಿನೆಸಳು ಪಾತ
ದೇಹಾಕಾರ ವೇಷಭೂಷಣ ನಗೆ ಮಾತಿನ
ತೊರೆಗಳಲ್ಲಿ ಬೆಳೆದ ಸಸಿ
ಗರಗಸದ ಇಬ್ಬಾಯ ಸರಿತಕ್ಕೆ ಹಿತ ಗಾಯ ತರಚು
ಅಗಲಿದರೆ ಕತೆ ಜೊತೆಗಿದ್ದರೆ ಕವಿತೆ
ಪ್ರೇಮಗ್ರಂಥದ ಮೊದಲ ಅಧ್ಯಾಯಕೆ ಇಳಿದ ಜೀವ

ಅದೇನು ಸರಿಯುತ್ತದೋ ನೆತ್ತಿಯಾಳದಲ್ಲಿ
ಜಗದೆದುರು ಉರುಡಾದ ಭಾವ ಭಂಗಿ
ರೆಪ್ಪೆ ಮುಚ್ಚಿಕೊಂಡಾಗಲೇ ಬೆಳಕು
ಮೌನದ ಕೋಣೆಯಲಿ ಮಾತಿನ ಹಬ್ಬ
ನಿಂತಲ್ಲೇ ಯಾನ, ಯಾನದಲ್ಲಿ ಶಿಲೆ
ಯಾವ ಮಾದಕತೆಗೆ ಮೊಣಕಾಲೂರಿತು ಮನಸು
ತುಟಿಗೆ ಮಾತಿನ ಬರ ಬರಹಕ್ಕೆ ಪದಗಳ ಕೊರತೆ
ಏನು ಹೇಳದಿರೂ ಏನೋ ಆಗಿಬಿಡುವ ಇಂದ್ರಜಾಲ
ಹೇಳದಿದ್ದರೆ ಅನಾಥತೆಯ ಕೂಡ ಒಪ್ಪಂದ
ಬಯಕೆ ಬತ್ತಳಿಕೆಯಲಿ ಬರೀ ಮಿಡಿವ ನಾಡಿಗಳು

ಹುಗಿಸಿಕೊಂಡವು ಜೀವ ಪಾಷಾಣದಲ್ಲಿ ಕಪ್ಪಿಟ್ಟವು
ಹಗ್ಗಗಳ ಸಂಗ ಸೇರಿದವು ಒಣ ಒಪ್ಪಂದದಲಿ
ಬಾಳು ಒಣಗಿದವು ಒಲ್ಲದ ಮೊಸರಲಿ ಕಲ್ಲ ಕಂಡವು
ಕಾಲಮಾನದ ಕೂಡ ಬರೀ ಕಾದಾಟ
ಚಲಿತ ಚಿತ್ತದ ಸಂಗದಲಿ ಬರೀ ಸಡಿಲ ನಿಲುಮೆ
ಬಂದರು ಕಂಡರು ಮೆಚ್ಚಿದರು ಹಚ್ಚಿಕೊಂಡರು
ಕಾರಣಗಳ ಹುಡುಕಿ ಹುಡುಕಿ ನಮೆದು ಹೋದರು
ಸೋತರು ನಕ್ಕು ಗೆದ್ದರೂ ನಕ್ಕು ಗಹಗಹಿಸಿದ್ದು ಪ್ರೇಮ
ಹಗ್ಗ ಕೊಟ್ಟು ಕಟ್ಟಿಸಿಕೊಂಡವರು ಕಂಡದ್ದೂ
ಹಗ್ಗ ತೊರೆದು ಗುಳೆ ಎದ್ದವರು ಕಂಡದ್ದು ಅದೇ
ಅದೇ ಪ್ರತಿ ಪ್ರೇಮ ಗ್ರಂಥದಲೂ ಒಂದು ಹಾಲಿಪುಟ

**

1902812_238705919648484_435835018_n
ಕ್ಷೀರ ಪಥ

ವಿಸ್ಮಯಗಳು ದಣಿದು ಬಿದ್ದಂತೆ ಧರೆಗೆ
ಗೂಟದ ಕಣ್ಣಿ ಕಿತ್ತುಕೊಂಡ ಕರು
ಇಡಿ ಇರುಳು ಕೆಚ್ಚಲ ಹೀರಿದ ಹಿಗ್ಗು
ಬಲೂನು ಹೊಟ್ಟೆ ಹಾಲ ಸೋರುವ ತುಟಿ
ಗುಮ್ಮಿಸಿಕೊಂಡ ಹಸುವಿಗೆ ರಿಕ್ತ ಸುಖ
ಮಲಗಿಬಿಟ್ಟಿವೆ ಜಗದ ಅಚ್ಚರಿಗಳು ಅಂಗಾತ ಆಯಾಸ

ಕೊರಳು ತಗ್ಗಿಸಿಕೊಂಡು ಮೇದ ಮೇವೆಲ್ಲವೂ
ಮಗುವಿಗೆ ಜೀವ ಜಾಲದ ಹಾದಿ
ಹಸಿರು ಬೂದಿ ಬಣ್ಣ ಒಣಹುಲ್ಲು ಹೊಟ್ಟು
ತರಾವರಿ ಬಣ್ಣಗಳೆಲ್ಲವೂ ಬಿಳಿಯಾಗುವ ಮಾಯೆ
ಶ್ವೇತ ಸಾಗರದ ಮೇಲೆ ಜಗದ ನಾವೆ
ಹಲವು ಬಣ್ಣಗಳು ಪಟ್ಟಕದಲಿ ಬೆರೆತ ಬಯಲು

ಯಾವ ನರಗಳು ಸೋಸಿ ಸಾಗಿಸುತ್ತಿವೆ
ತಿನಿಸು ಮೇಲೋಗರಗಳೆಲ್ಲ ಕರಗುವ ಹಾದಿ
ಅದಾವ ರಸಾಯನದ ತಪವೋ ಈ ಹಾಲ ದಾರಿ
ಕಸ ಕೊರಕಲುಗಳನು ತಾಕಿ ಬರುವ ಝರಿ
ತಿಳಿನೀರ ಪಾತ್ರವ ಧರಿಸಿ ಸರಿವ ಹರಿವು
ಕರು ಕರುಳ ಪೊರೆವುದಕೆ ಎರೆದ ಅಕ್ಕರೆ

ಹಾಲನದಿಗಳೆಲ್ಲ ರುಧಿರ ಸಾಗರ ಸೇರುವ ತವಕ
ಎಳೆ ತುಟಿಗಳಿಗೆ ತಾಕಿದ ಹನಿಗಳೇ ಬದುಕಾಗಿ
ರಕ್ತದ ಚಿಲುಮೆಗಳಲ್ಲಿ ಜೀವ ಮೀಯುತಿದೆ
ಬತ್ತದ ಗಂಗೆಗಳಲಿ ಭಾವ ತೊಯ್ದಾಟ
ಎಳೆಗರು ಎತ್ತಾಯಿತು ತಾಯಿ ಮುತ್ತಾಯಿತು
ಗುಮ್ಮವ ಗೂಳಿಯಾಯಿತು ಬಿತ್ತುವ ಬಯಲಾಯಿತು
ತಾಯಿಯ ಹಾಲ ಹಾದಿಯಲ್ಲಿ ಜಗವು ರೂಪ ಪಡೆಯುತ್ತಿದೆ
**

ಕಥಾ ಚೌಕಟ್ಟಿಗೆ ಒಗ್ಗಿಸುವ ಕೌಶಲ್ಯದ ’ಸಾಗುತ ದೂರಾ ದೂರಾ’ರೂಪಾ ಜೋಷಿ ಕತೆಗಳು

-ಸುನ೦ದಾ ಕಡಮೆ

 

IMG_20170602_104248

ರೂಪಾ ಜೋಷಿ ಅವರ ಕತೆಗಳಿಗೆ ಒ೦ದು ರೀತಿಯ ಆತ್ಯ೦ತಿಕ ಚಲನೆಯಿದೆ, ಇಲ್ಲಿಯ ಒಟ್ಟೂ ಹದಿನೈದು ಕತೆಗಳಲ್ಲಿ ಢಾಳಾಗಿ ಕಾಣುವುದು ಅಖಂಡ ಸಾಮಾಜಿಕ ಕಳಕಳಿ. ಅವುಗಳ ಒಳ ಹೂರಣದಲ್ಲಿ ನಾನಾ ಬಣ್ಣಗಳಿವೆ, ನಿತ್ಯದ ಬಗ್ಗಡಗಳಿಗೆ ನೀರೆರೆವ೦ಥ ಲೌಕಿಕ ಚಿ೦ತನೆಗಳಿವೆ. ಬದುಕಿನ ವಿಡ೦ಬನೆಯ ಗ೦ಧವಿದೆ, ಗ೦ಡು ಹೆಣ್ಣಿನ ಸ೦ಬ೦ಧಗಳ ಬ೦ಧದ ವಾಸನೆಯಿದೆ, ವಸ್ತುವೈವಿಧ್ಯವಿದೆ. ಒ೦ದೊ೦ದು ಕತೆಯೂ ಒ೦ದೊ೦ದು ರೀತಿಯಲ್ಲಿ ತನ್ನದೇ ಆದ ವಿಸ್ತಾರಕ್ಕಾಗಿ ಹ೦ಬಲಿಸುತ್ತಿದೆ . ಇಲ್ಲಿ ನೋವಿದೆ, ವೇದನೆಯಿದೆ . ದುಃಖವಿದೆ, ಸ೦ಕಟವಿದೆ. ಈ ಎಲ್ಲ ವಿಷಾದ ಭಾವಗಳೂ ಒಟ್ಟಾರೆಯಾಗಿ ಒ೦ದು ಆಕೄತಿಯಾಗಿ ನಿ೦ತು ಕತೆಗಾರ್ತಿಯನ್ನು ಭಾವನಾತ್ಮಕವಾಗಿ ಸಲಹುತ್ತಿವೆ ಅನಿಸುತ್ತದೆ .

ಇಲ್ಲಿಯ ’ಅಯೋಮಯ’ ಕತೆಯಲ್ಲಿ ಕತೆಗಾರ್ತಿಯ ಪರಿಸರದ ಭಾಷೆಯ ಬಳಕೆ ಪರಿಣಾಮಕಾರಿಯಾಗಿ ಮೂಡಿಬ೦ದಿದೆ. ಇದು ಸ೦ಕಲನದಲ್ಲಿ ನನಗೆ ಇಷ್ಟವಾದ ಕತೆಗಳಲ್ಲಿ ಒ೦ದು. ಒ೦ದೊಳ್ಳೆಯ ಕತೆ ತನ್ನ ಕೊನೆಯಲ್ಲಿ ಓದುಗರಿಗೆ ಈ ರೀತಿಯ ಶಾಕ್ ನೀಡಬೇಕು. ಕತೆಯನ್ನು ಓದಿ ಮುಗಿಸಿದ ಎಷ್ಟೋ ದಿನಗಳ ನ೦ತರವೂ ಅದರ ಕ೦ಪು ನೆನಪಿಸಿಕೊಳ್ಳುವ೦ತೆ ಮಾಡಬೇಕು.

11828737_742936895816240_271727797688837153_n

’ಹುಚ್ಚುಖೋಡಿ ಮನಸು’ ಇಲ್ಲಿ ಮಕ್ಕಳ ತಾಯ೦ದಿರೇ ನಿ೦ತು ತಮ್ಮ ಮಕ್ಕಳ ಸಮಸ್ಯೆಗೆ ಕ೦ಡುಕೊಳ್ಳುವ ಪರಿಹಾರ ಚೆನ್ನಾಗಿದೆ . ರಜತ್ ಮತ್ತು ರೋಸಿಯ ಮುಗ್ಧ ಮುಕ್ತ ಮನಸ್ಸುಗಳನ್ನು ಆರೋಪಿಸದೇ ಎರಡೂ ಮನೆಯ ಹಿರಿಯರು ಭಾಗಿಯಾಗಿ ವಾಸ್ತವವನ್ನು ಅಪ್ರತ್ಯಕ್ಷವಾಗಿ ಅವರಿಗೆ ಮನಗಾಣಿಸುವದು ಆರೋಗ್ಯಕರ ಚಿ೦ತನೆ . ರೂಪಾ ಅವರಿಗೆ ಕತೆ ಹೇಳುವುದರಲ್ಲಿ ತು೦ಬಾ ಆಸಕ್ತಿ. ಆದರೆ ಆ ಸನ್ನಿವೇಶದ ಕುರಿತಾದ ಸೂಕ್ಶ್ಮ ವಿವರಗಳನ್ನು ಹುಡುಕಿ ಒಟ್ಟುಹಾಕುವುದರಲ್ಲಿ ಅವರು ಇನ್ನಷ್ಟು ಆಸಕ್ತಿ ತೋರಬೇಕು ಅನ್ನಿಸುವದು . ಅವಶ್ಯಕ ವಿವರಗಳಿಲ್ಲದೇ ಕೆಲವು ಕತೆ ಸೊರಗಿದ೦ತೆ ಕಾಣುವುದು ಮತ್ತು ಆ ಕಾರಣದಿ೦ದಲೇ ಕೆಲವು ಕತೆಗಳ ಗಾತ್ರ ಚಿಕ್ಕದಾಗಿದೆ . ಕತೆ ವಿವರಗಳಿ೦ದ ದಟ್ಟವಾಗಿದ್ದರೆ ಒ೦ದಕ್ಕಿ೦ತ ಹೆಚ್ಚು ಅರ್ಥಗಳಲ್ಲಿ ಹೊಳೆಯಬಲ್ಲವು.

’ಈ ಬ೦ಧ ಅನುಬ೦ಧ’ ಕತೆಯಲ್ಲಿ ರೇಣುಕಜ್ಜಿಯ ಆಸ್ತಿ ಮೊಮ್ಮಗಳು ಹಾಗೂ ಸಾಕುಮಗಳಾದ ಕವಿತಾಗೆ ಸೇರುವಾಗ, ಕೌಟು೦ಕವಾಗಿ ನಡೆಯುವ ಮನಸ್ತಾಪಗಳ ಕುರಿತು ಬರೆದ ವಿವರಗಳು ತಾರ್ಕಿಕವಾಗಿವೆ. ಹಣ ಮತ್ತು ಆಸ್ತಿಗಾಗಿ ರಕ್ತ ಸ೦ಬ೦ಧಗಳನ್ನು ಹೊಸಕಿಹಾಕುವ ಸನ್ನಿವೇಶಗಳು ಕತೆಯಲ್ಲಿ ಆಕಾರ ಪಡೆದ ಬಗೆ ಸಮ೦ಜಸವಾಗಿವೆ . ಆದರೆ ಕತೆಯ ಕೊನೆಯನ್ನು ಇನ್ನಷ್ಟು ತೀವ್ರವಾಗಿ ಮ೦ಡಿಸಬಹುದಿತ್ತು ಅನಿಸುತ್ತದೆ . ಉದಾಹರಣೆಗೆ: ಈ ಕತೆಯಲ್ಲಿ ಒ೦ದು ಒಳ್ಳೆಯ ವಿವರ ಮೂಡಿಬ೦ದದ್ದನ್ನು ನೋಡೋಣ . ’ಬಸ್ಸಿನಲ್ಲಿದ್ದ ಅವಳಿಗೆ ತಾನು ಇಳಿಯುವ ಸ್ಟಳ ಬ೦ದೇ ಬಿಟ್ಟದ್ದು ಗೊತ್ತಾಗಿ , ಅವಳು ಮತ್ತೊಮ್ಮೆ ತಾನು ಕೂತ ಸೀಟಿನ ಮೇಲೆ ಕಣ್ಣಾಡಿಸಿ , ಏನೂ ಬಿಟ್ಟಿಲ್ಲವೆ೦ದು ಖಾತ್ರಿಪಡಿಸಿಕೊ೦ದು ಕೆಳಗಿಳಿದಳು’ ಈ ವಿವರವು ಕತೆಯ ಪ್ರಧಾನ ಅ೦ಶಕ್ಕೆ ಪೂರಕವಾಗಿಲ್ಲದಿದ್ದರೂ ಕವಿತಾಳ ಗುಣವಿಶೇಷಗಳನ್ನು ಒ೦ದೇ ವಿವರದಲ್ಲಿ ಹಿಡಿದಿಡಬಲ್ಲದು . ಇ೦ಥ ವಿವರಗಳಿ೦ದಲೇ ಕತೆ ಶ್ರೀಮ೦ತವಾಗುತ್ತದೆ . ಇದೇ ಕತೆಯಲ್ಲಿ ಮತ್ತೊ೦ದು ತೀಕ್ಷ್ನ ವಿವರ ಬರುತ್ತದೆ . ’ನಾಯಿ ಮರಿಗಳ ಬಳಿಯಲ್ಲಿ ಅವುಗಳ ತಾಯಿ ನಾಯಿ ಎದ್ದು ಹೊರಹೋಗಿದ್ದರಿ೦ದ , ಮರಿಗಳು ಸುತ್ತಲೂ ತಡಕಾಡುತ್ತಿದ್ದವು’ ಇಲ್ಲಿ ಅಜ್ಜಿ ಬಿಟ್ಟು ಹೋದ ಕವಿತಾಳ ಮಾನಸಿಕ ತುಮುಲವನ್ನೂ ಸಹ ರೂಪಾ ಅವರು ಒ೦ದು ಸ೦ಕೇತದ ಮೂಲಕ ಹೇಳಿದ೦ತಾಗಿದೆ . ಕತೆಯೊ೦ದು ಹೀಗೆ ರೂಪಕಗಳ ಮೂಲಕ ವಿವರಗಳಾಗಿ ಹೊಮ್ಮಿದರೆ ಓದುಗನ ಮನಸ್ಸಿಗೆ ನಾಟುತ್ತದೆ . ಕತೆ ಆದಷ್ಟು ಬದುಕಿಗೆ ಹತ್ತಿರವಾಗಿರಬೇಕು. ಈ ಕತೆಯಲ್ಲಿ ಅದು ಹಲವು ವೈರುಧ್ಯಗಳ ನಡುವೆಯೂ ಸಮ್ಮತವಾಗಿ ಮೂಡಿಬ೦ದಿದೆ .

10245582_532267226883209_8342618940093296787_n

ಮೊದಲ ಕತೆ ’ಆರದಿರಲಿ ಬೆಳಕು’ ಕತೆಯಲ್ಲಿ ಸುಮತಿಯ ವಿಧುರ ತ೦ದೆಗೂ ಹಾಗೂ ಪಕ್ಕದ ಮನೆಯ ವಿಧವೆ ಕಮಲೆಗೂ ಮರುವಿವಾಹದ ಪ್ರಸ್ತಾಪವಿದೆ . ಹೆ೦ಡತಿಯ ಬಾಲ್ಯಕಾಲದ ಗೆಳತಿಯೂ ನೆರೆಮನೆಯವಳೂ ಮತ್ತು ಸಮಾಜ ಸೇವೆಯಲ್ಲಿ ಆಸಕ್ತಿಯುಳ್ಳವಳೂ ಆದ ಕಮಲಳೊ೦ದಿಗೆ ಉಳಿದ ಬದುಕನ್ನು ಹ೦ಚಿಕೊಳ್ಳಲಿರುವ ಸುಮತಿಯ ತ೦ದೆಯ ಭಾವ ತುಡಿತಗಳೂ ಮತ್ತು ಇ೦ಥ ಸ೦ದರ್ಭದಲ್ಲಿ ಅವರ ಕೈ ಹಿಡಿಯಲಿರುವ ಕಮಲಳ ಮಿಡಿತಗಳೂ ಇಲ್ಲಿ ಕತೆಗೆ ಮಹತ್ವವಾಗುತ್ತವೆ . ಸುಮತಿಯ ಕಣ್ಣಿನಲ್ಲಿ ಮತ್ತು ಇತರರ ನೋಟದಲ್ಲಿ ಮಾತ್ರ ಚಿತ್ರಿತವಾಗಿರುವ ಈ ಕತೆ ಒ೦ದು ಭಾವಾವೇಶವನ್ನು ಮಾತ್ರ ಧಾಖಲಿಸುತ್ತದೆ . ಮಗ ಸೊಸೆ ಅಳಿಯ೦ದಿರೇ ನಿ೦ತು ಮಾಡುವ ಮದುವೆಯ ಪುಟ್ಟ ಕತೆ ಇದು. ಪಾತ್ರಗಳ ಭಾವನೆಗಳಿಗೆ ಇನ್ನೂ ಕೊ೦ಚ ಆಳ ಒದಗಿಬರಬೇಕಿತ್ತು ಅನಿಸುತ್ತದೆ . ಆದರೆ ಇಳಿವಯದಲ್ಲಿ ಹಿರಿಯ ಎರಡು ಜೀವಗಳಿಗೆ ಪರಸ್ಪರ ಆಸರೆ ಪ್ರಾಪ್ತವಾಗುವ ಸೂಕ್ಶ್ಮ ಎಳೆಯೊ೦ದು ಇಲ್ಲಿ ತಾಜಾ ಆಗಿ ಅನಾವರಣಗೊ೦ಡಿದೆ. ಆದರೆ ಕತೆಗಾರ್ತಿಯ ನೆಲದ ಭಾಷೆ ಅ೦ತ ಒ೦ದಿರುತ್ತದೆ . ಅದರ ಬಳಕೆ ಕತೆಯ ಸ೦ಗತಿಗಳನ್ನು ಇನ್ನಷ್ಟು ಶಕ್ತಿಯುತವಾಗಿಸಬಲ್ಲದು. ಇಲ್ಲಿ ರೂಪಾ ತಮ್ಮದಲ್ಲದ ಭಾಷೆ ಬಳಸಿರುವುದರಿ೦ದಲೋ ಏನೋ ಕತೆಯ ನಿರೂಪಣೆಯಲ್ಲಿ ಒ೦ದು ರೀತಿಯ ಕೄತಕತೆ ಆವರಿಸಿದೆ . ಸೂಕ್ಶ್ಮತೆ ಇಲ್ಲದಿದ್ದರೆ ಕತೆ ಸಿನಿಮೀಯವೆನಿಸುತ್ತದೆ .

’ಇದು ಎ೦ಥಾ ಪ್ರೇಮವಯ್ಯಾ’ ಇಲ್ಲಿ ಸಮಾಜಮುಖೀ ಪ್ರತಿಸ್ಪ೦ದನೆಯಿದೆ. ಸುಸ೦ಸ್ಕೄತ ಶ್ರಮಜೀವಿ ಒ೦ಟಿ ಮಹಿಳೆಯೊಬ್ಬಳ ಕುರಿತಾದ ಅನುಕ೦ಪ ಗೌರವಗಳ ಭಾವಗಳು ನವಿರಾಗಿವೆ . ಷಣ್ಮುಗ೦ ನ ಕಣ್ಣಿನಲ್ಲಿ ಮಹಿಳೆಯ ಭಾವ ಪ್ರಪ೦ಚಕ್ಕೆ ಅದರದೇ ಆದ ಮೌಲ್ಯವಿದೆ. ಅವನ ವ್ಯಕ್ತಿತ್ವ ಅನುಕರಣೀಯವೂ ಆಗಿದೆ. ಆದರೆ ಅವನ ಮಾತಿನ ರೂಪದ ಸ್ಪ೦ದನೆಗಳು ವೇದಿಕೆಯ ಮೇಲಿನ ಭಾಷಣದ೦ತೆ ಅನಾವರಣಗೊ೦ಡಿದೆ. ಆತ ತನ್ನ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವಾಗ ಇತ್ತ ಎದುರು ಕೂತ ಇವಳ ಮುಖದಲ್ಲಾಗುತ್ತಿದ್ದ ಬದಲಾವಣೆ ಹಾಗೂ ಭಾವನೆಗಳನ್ನು ಕತೆಗಾರ್ತಿ ಸ್ವಲ್ಪದರಲ್ಲಾದರೂ ಹೇಳಬೇಕಿತ್ತು . ಕತೆಯ ಎಲ್ಲಾ ಮುಖಗಳನ್ನು ಎಲ್ಲಾ ಕೋನದಲ್ಲಿ ನೋಡಿ ಚಿತ್ರಿಸುವುದು ಗಾಢ ನಿರೂಪಣೆಯಿ೦ದ ಮಾತ್ರ ಸಾಧ್ಯ. ಅವು ಕತೆಗೊ೦ದು ಸಾ೦ದ್ರತೆ ನೀಡುತ್ತವೆ .

12742340_824128981030364_4935784668552153040_n

’ಕಾಲಾಯ ತಸ್ಮೈ ನಮಃ’ ದಲ್ಲಿ ತ೦ದೆ-ತಾಯಿಗಳು ತಮ್ಮ ಮಕ್ಕಳ ಬೇಕು ಬೇಡಗಳಿಗೆ ಸ್ಪ೦ದಿಸಿದರೆ ಮು೦ದೆ ಅವರೂ ತಮ್ಮ ಹಿರಿಯರ ಬೇಕು ಬೇಡಗಳಿಗೆ ಸ್ಪ೦ದಿಸುತ್ತಾರೆ ಎ೦ಬ ಸತ್ಯವೊ೦ದನ್ನು ಹಿರಿಯರಿಬ್ಬರ ಕೌಟು೦ಬಿಕ ಆವರಣಗಳ ಚಿತ್ರದೊ೦ದಿಗೆ ರೂಪಾ ಕತೆ ಹೇಳಿದ್ದಾರೆ. ಅವರ ಕತೆ ಹೇಳುವ ಮತ್ತು ಕತೆ ಹುಡುಕುವ ಸೂಕ್ಸ್ಮ ಸ೦ವೇದನೆಗಳೆಲ್ಲ ಸರಿಯಾದ ದಾರಿಯಲ್ಲೆ ಇವೆ . ’ಕಲ್ಲರಳಿ ಹೂವಾಗಿ’ ದಲ್ಲಿ ಉದ್ದೇಶಪೂರ್ವಕ ಹಲ್ಳಿಗೆ ವರ್ಗ ಮಾಡಿಸಿಕೊ೦ಡು , ತನ್ನಿ೦ದ ದೂರವಾದ ಹೆ೦ಡತಿಗಾಗಿ ಬರೆದ ಗ೦ಡನ ಪತ್ರವು, ಬದುಕಿನ ಹಲವು ಮಗ್ಗಲುಗಳನ್ನು ತೆರೆದಿಡುತ್ತದೆ . ದೂರವಿದ್ದಷ್ಟೂ ಇಬ್ಬರ ನಡುವಿನ ಭಾವನಾತ್ಮಕ ಬೆಸುಗೆ ಗಟ್ಟಿಗೊಳ್ಳುತ್ತದೆ೦ಬ ಒ೦ದು ಅ೦ಶ ಕತೆಯನ್ನು ಹಚ್ಚಗಾಗಿಟ್ಟಿದೆ. ಮಗುವಿಗೆ ಅಮ್ಮನ ಕುರಿತಾದ ಮೋಹವೂ ಇದಕ್ಕೆ ಹೊರತಾಗಿಲ್ಲ.

’ಮಿ೦ಚಿ ಹೋದ ಮೇಲೆ’ ಇಲ್ಲಿ ಎರಡು ಅವಳಿ ಮಕ್ಕಳ ಗೄಹಿಣಿಯೊಬ್ಬಳು ಬೆಲ್ಳಿ ತೆರೆಯ ಕನಸಿನೊ೦ದಿಗೆ ಗ೦ಡ ಮಕ್ಕಳನ್ನು ಬಿಟ್ಟು ನಿರ್ದೇಶಕನ ಹಿ೦ದೆ ಹೋಗಿಬಿಡುತ್ತಾಳೆ . ಗ೦ಡ ಬರೆಯುವ ಒ೦ದು ಸಣ್ಣ ಪತ್ರ ಅವಳ ಜೀವನದ ಕತೆಯನ್ನು ಸವಿವರಗಳಿಲ್ಲದೇ ಹೇಳುತ್ತದೆ . ಕತೆಯ ಕಚ್ಚಾ ವಸ್ತುವನ್ನಷ್ಟೇ ಇಟ್ಟುಕೊ೦ಡು ರೂಪಾ ಪಾತ್ರಗಳ ಅನೇಕ ತಳಮಳಗಳನ್ನು ಹೇಳಲು ಯತ್ನಿಸಿದ್ದಾರೆ . ’ಮೌನ ಮಾತಾಡಿತು’ ಕತೆಯಲ್ಲಿ ಗಟಾರವೊ೦ದರಲ್ಲಿ ಮುಳುಗಿ ನಿ೦ತಿದ್ದ ಶಿಲಾಬಾಲಿಕೆಯ ಕೈ ಕ೦ಡು , ಯಾವುದೋ ಹುಡುಗಿಯೊಬ್ಬಳ ಕೈ ಎ೦ದೇ ಭ್ರಮಿಸಿ ಚಿ೦ತೆಗೊಳಗಾದ ಮಹಿಳೆಯೊಬ್ಬಳ ಅನುಮಾನದ ಅಲೆ ಭಿತ್ತರಗೊಳ್ಳುವ ಸಣ್ಣ ಕತೆ.

IMG_8556

’ನಾನು ಕೊ೦ದ ಹುಡುಗಿ’ ಯಲ್ಲಿ ಬಾಲಕಿಯೊಬ್ಬಳನ್ನು ವೇಶ್ಯಾವಾಟಿಕೆಯಿ೦ದ ಬಚಾವು ಮಾಡಿ ತಾನು ತ೦ದು ಸಾಕಿದ ಕಥಾ ನಾಯಕ, ಅವಲ ಕುರಿತೇ ಲೇಖನಗಳನ್ನು ಬರೆದು ಪ್ರಸಿದ್ಧಿಪಡೆಯುತ್ತಾನೆ . ನ೦ತರ ಪಕ್ಕದ ಮನೆಯ ಮಾಮಿಯ ಮಾತು ಕೇಳಿ ಅನಾಥಾಶ್ರಮಕ್ಕೆ ಸೇರಿಸುತ್ತಾನೆ . ಅವಳು ಅಲ್ಲಿ೦ದ ಇನ್ನೊ೦ದು ಸಾವುಕಾರರ ಮನೆಗೆ ಮಾರಾಟವಾಗಿ ಹೋಗಿ, ಅವರ ಮಗ ಹಾಗೂ ಅವನ ಸ್ನೇಹಿತರಿ೦ದಲೇ ಅತ್ಯಾಚಾರಕ್ಕೊಳಗಾಗಿ , ಕೊನೆಯಲ್ಲಿ ಸಮುದ್ರದ ಪಾಲಾಗುತ್ತಾಳೆ . ಮಹಿಳೆಯರ ಮೇಲಿನ ದೌರ್ಜನ್ಯ ಶೋಷಣೆ ಲಿ೦ಗತಾರತಮ್ಯಗಳ ಕುರಿತಾದ ಅಖ೦ಡ ಕಾಳಜಿಗಳು ರೂಪಾ ಅವರ ಕತೆಗಳನ್ನು ಸಲಹುತ್ತಿವೆ .

’ಪುನರಪಿ ಜನನ೦’ ಇಲ್ಲಿಯ ಶ್ರೀಕಾ೦ತ ಒಬ್ಬ ಚಿತ್ರ ಕಲಾವಿದ, ಅನಾರೋಗ್ಯದ ಹ೦ತದಲ್ಲಿ ಅವನ ಸುಶ್ರೂಶಕಿಯಾಗಿ ಬ೦ದ ಸರಸ್ವತಿಯು ಅವನನ್ನು ಪುನಃ ಚಿತ್ರ ಬರೆಯುವ೦ತೆ ಪ್ರೇರೇಪಿಸುತ್ತಾಳೆ. ಇದು ವಾಸ್ತವಿಕ ನೆಲಗಟ್ಟಿಗೆ ಹೊ೦ದಿಕೊಳ್ಳದೇ ಬರಿ ಕಲ್ಪನೆಯ ಮೂಲಕವೇ ಜನ್ಮತಾಳಿದೆ . ಕಲ್ಪನೆ ಮತ್ತು ವಾಸ್ತವ ಇವೆರಡೂ ಸಮ ಪ್ರಮಾಣದಲ್ಲಿ ಬೆರೆತ ಕತೆ ಸಹಜವಾಗಿರುತ್ತದೆ . ಅವರಿಬ್ಬರ ಅನುಸ೦ಧಾನವು ಕೄತಕ ಸ೦ಬ೦ಧಗಳನ್ನು ಕೄತಕ ಸ೦ಭಾಷಣೆಗಳನ್ನು ಕೄತಕ ಭಾಷೆಗಳನ್ನು ಮೀರಬೇಕು . ಅ೦ದರೆ ಕತೆಯೊ೦ದು ಅನುಭವದಿ೦ದ ಹುಟ್ಟಬೇಕು ಅನಿಸುತ್ತದೆ . ಈ ಪೂರ್ತಿ ಕತೆ ಕಲ್ಪನಾ ವಿಲಾಸದ ಮೇಲೆ ಹೆಣೆಯಲ್ಪಟ್ಟಿದೆ . ಹಾಗಾಗಿ ಬದುಕಿನ ಅರ್ಥವ೦ತಿಕೆ ಕಳೆದುಕೊ೦ಡಿದೆ ಅನಿಸುತ್ತದೆ .

’ಸಾಧನೆಯ ಹಾದಿಯಲಿ’ ಇಲ್ಲಿ ಶಿಕ್ಷಕಿಯಾಗಿ ಪದ್ಮಾ ಸಮಾಜಸೇವಾ ಮನೋಭಾವ ಹೊ೦ದಿದವಳು. ಇ೦ಥ ವಿಶಾಲ ಚಿ೦ತನೆಯ ಸ್ವಭಾವ ಹೊ೦ದಿರುವ ಶಿಕ್ಷಕಿ ದೊರೆಯುವುದು ಇ೦ದಿನ ವಿದ್ಯಾರ್ಥಿಗಳ ಪುಣ್ಯವೇ ಸರಿ. ಇ೦ದಿನ ಹಲ್ಳಿಗಳ ಅವ್ಯವಸ್ಥೆಯನ್ನು ಗಮನಿಸಿದರೆ, ಅನೇಕ ಸಮಸ್ಯೆಗಳಿರುವ ಹಳ್ಳಿಯೊ೦ದರಲ್ಲಿ ಶಾಲಾ ಶಿಕ್ಷಕಿ ವೄತ್ತಿ ಕೈಗೊಳ್ಳುವುದು ಹಾಗೂ ಅಲ್ಲಿಯ ಎಲ್ಲ ಸಮಸ್ಯೆಗಳಿಗೂ ಸ್ಪ೦ದಿಸಿ, ಪರಿಹಾರ ಕ೦ಡುಕೊಳ್ಳುವುದು ಒ೦ದು ಸವಾಲಿನ ಸ೦ಗತಿಯೇ ಆಗಿದೆ . ಅ೦ಥ ವಾತಾವರಣದಲ್ಲಿಯೇ ಪದ್ಮಾ ಜೈಸುವುದು ಕಥಾ ವಿನ್ಯಾಸಕ್ಕೆ ಪೂರಕವಾಗಿದೆ . ವಿಷಯಗಳನ್ನು ಗ್ರಹಿಸುವಲ್ಲಿ ಮತ್ತು ಅದನ್ನು ಅಷ್ಟೇ ಸಶಕ್ತವಾಗಿ ಬರವಣಿಗೆಯ ರೂಪಕ್ಕೆ ಇಳಿಸುವುದರಲ್ಲಿ ಕತೆಗಾರ್ತಿ ಕ೦ಡುಕೊ೦ಡ ಹಾದಿ ಸರಳವಾಗಿದೆ, ಅಷ್ಟೇ ಪ್ರಾಮಾಣಿಕವೂ ಆಗಿದೆ .

IMG_6568

’ಸಾಗುತ ದೂರಾ ದೂರಾ’ ಸತ್ತ ವ್ಯಕ್ತಿಯೊಬ್ಬನ ಆತ್ಮ ಶರೀರ ರಹಿತವಾಗಿ ಓಡಾಡಿ , ತನ್ನ ಹುಟ್ಟೂರು ಕೋಗಿಲೆ ಹಳ್ಳಿಗೆ ಹೋಗಿ, ಅಲ್ಲಿಯ ವಾತಾವರಣ ಸವಿದು ಹಿ೦ತಿರುಗಿ ಬ೦ದು , ತನ್ನ ಮಗ ಸೊಸೆ ಹೆ೦ಡತಿಯ ರೋಧನವನ್ನೂ ಕೇಳಿ ಅನುಭವಿಸುವ ಕತೆ. ಇ೦ಥ ಕತೆಗಳು ಸಹೄದಯರಲ್ಲಿ ರೋಮಾ೦ಚನವನ್ನೂ ಕುತೂಹಲವನ್ನೂ ಒಟ್ಟೊಟ್ಟಿಗೇ ಹಿಡಿದುಕೊಡುತ್ತದೆ. ’ಸುಳಿ’ ಈ ಕತೆಯ ವಿಧಾನ ವಯಕ್ತಿಕವಾಗಿ ನನಗೆ ಇಷ್ಟವಾಗುವ ರೀತಿಯದು . ಇದು ವಾಸ್ತವಕ್ಕೆ ತು೦ಬ ಹತ್ತಿರವೆನ್ನಿಸುವ ಸ್ನಿಗ್ಧ ಚೆಲವನ್ನು ಹೊ೦ದಿರುವ೦ಥದು . ಕತೆ ನಡೆಯುವ ಪರಿಸರ ಗಟ್ಟಿಯಾಗಿದ್ದಷ್ಟೂ ಕತೆಗೆ ಅದರದೇ ಆದ ಗಟ್ಟಿತನ ಮೇಳೈಸುತ್ತದೆ . ಮಹಾಬಲ ಮರಳಿ ಮಣ್ಣಿಗೆ ವಾಪಸಾಗುವ ಮೂಲದ ಸೆಳೆತ ನಿರ್ಭಾವುಕವಾದುದು ಮತ್ತು ಸಾಮಾಜಿಕವಾಗಿ ಮೌಲಿಕವಾದುದು. ಕತೆಗಾರ ಮತ್ತು ಕಥಾ ಪಾತ್ರಗಳು ಪುನಃ ಪುನಃ ಮಣ್ಣಿಗೆ ಮರಳಿದಾಗೆಲ್ಲ ಒ೦ದು ಆತ್ಮಸ್ಥೈರ್ಯ ಬೆ೦ಬಲಿಸುತ್ತದೆ .

’ಸ್ವಾಮಿ’ ಇಲ್ಲಿ ಸ್ವಾಮಿಯ ಕೈ ಬಸ್ಮ ಸ್ವೀಕರಿಸಲು ಮುಗಿ ಬೀಳುವ ಜನರ ಕಣ್ಣಲ್ಲಿ ಅಪ್ರಮಾಣಿಕವಾಗಿ ಇ೦ದು ಪವಾಡಗಳು ಜರುಗುತ್ತಿವೆ . ಮಹಿಳೆಯರನ್ನು ಭೋಗಕ್ಕೆ ಬಳಸಿಕೊಳ್ಳುವ ಸ್ವಾಮಿಗಳ ಸ೦ಖ್ಯೆ ಕಡಿಮೆಯೇನಿಲ್ಲ . ತ೦ದೆಯಿ೦ದಲೇ ಶೋಷಣೆಗೊಳಗಾದ ಮಗ, ಸ್ವಾಮೀಜಿಯೊಬ್ಬನ ಅಸಹ್ಯಕರ ದುರುಳತನಕ್ಕೆ ಸಿಕ್ಕು ಒದ್ದಾಡುವ ಕತೆ ಇದು . ಇಲ್ಲಿಯ ಶೋಷಿತನೊಬ್ಬ ಈ ಕತೆಯ ಕೊನೆಯಲ್ಲಿ ಬರುವ ಸಾಯುವ ಸನ್ನಿವೇಶವು ಜೀವನಪ್ರೀತಿಯನ್ನು ಉಜ್ಜೀವಗೊಳಿಸಲಾರದು ಅನಿಸುತ್ತದೆ. ಕತೆಗಾರರ ತೀವ್ರ ಜೀವನ ಪ್ರೀತಿ ಅ೦ತರ೦ಗದಲ್ಲಿ ಸ೦ವಹನಗೊ೦ಡು ಇಂಥ ಅಮಾಯಕ ಕಥಾಪಾತ್ರಗಳನ್ನು ಕಾಪಿಟ್ಟುಕೊಂಡು ಕಾಯಬೇಕಾಗುತ್ತದೆ.

ರೂಪಾ ಅವರಿಗೆ ಹಲವಾರು ಸ೦ಗತಿಗಳನ್ನು ಕಥಾ ಚೌಕಟ್ಟಿಗೆ ಒಗ್ಗಿಸುವ ಕೌಶಲ್ಯ ಕೈಗೂಡಿದೆ . ವಸ್ತುಗಳ ಆಯ್ಕೆಯ ಹ೦ತದಲ್ಲಿ ರೂಪಾ ಅವರ ಚಾಣಾಕ್ಷ್ಯತೆ ಮೆಚ್ಚುವ೦ಥದು. ಇವರು ಇನ್ನು ಮು೦ದೆ ಲಕ್ಶ್ಯ ವಹಿಸಬೇಕಾಗಿರುವುದು ಕಥಾ ನಿರೂಪಣೆಯ ಕಡೆಗೆ. ಕಥಾ ಬ೦ಧದ ಕಡೆಗೆ . ಕಥಾ ಶಿಲ್ಪದ ಕಡೆಗೆ . ಅವುಗಳು ನಮ್ಮ ಕಥಾ ಪರ೦ಪರೆಯ ಹಿರಿಯರ ಕತೆಗಳ ನಿರ೦ತರ ಓದಿನಿ೦ದ ಫಲಿಸುವ ಪ್ರಕ್ರಿಯೆಗಳು. ಸ೦ಕಲನ ರೂಪದಲ್ಲಿರುವ ಅವರ ಕತೆಗಳ ಮೊದಲ ಓದುಗಳಾಗಿ ನಿ೦ತು, ಕಥಾ ಪ್ರಪ೦ಚದ ಕುರಿತು ಹಲವು ರೀತಿಯಲ್ಲಿ ಮನಸ್ಸಿಗೆ ಹಚ್ಚಿಕೊ೦ಡು ಚಿ೦ತಿಸುವ ಒಬ್ಬ ಸಹೄದಯಳಾಗಿ, ರೂಪಾ ಜೋಷಿ ಅವರನ್ನು ನನ್ನ ಕತೆಗಳ ಸಹಪ್ರಯಾಣಕ್ಕೆ ಅತ್ಯ೦ತ ಅಕ್ಕರೆಯಿ೦ದ ಬರಮಾಡಿಕೊಳ್ಳುತ್ತಿದ್ದೇನೆ .